ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಆಶ್ರಯದಲ್ಲಿ, ಎಂ.ತುಂಗಪ್ಪ ಬಂಗೇರಾ ನೇತೃತ್ವದಲ್ಲಿ ಸಾಮೂಹಿಕ ವಿವಾಹ, ಸ್ವಸ್ತಿಸಿರಿ ರಾಜ್ಯ ಪ್ರಶಸ್ತಿ ಪ್ರದಾನ

ಬಂಟ್ವಾಳ:  ಪುಂಜಾಲಕಟ್ಟೆ  ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‌ನ 39ನೇ ವರ್ಷಾಚರಣೆಯ ಪ್ರಯುಕ್ತ ಎಂ.ತುಂಗಪ್ಪ ಬಂಗೇರಾ ನೇತೃತ್ವದಲ್ಲಿ ಭಾನುವಾರ  ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ನಡೆದ 15ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ 9 ಜೋಡಿಗಳು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದ್ದಾರೆ.    

                

   ವೇ.ಮೂ.ಶ್ರೀ ಕೃಷ್ಣ ಭಟ್ ಕಾರ್ಕಳ ನೇತೃತ್ವದಲ್ಲಿ ಮಂತ್ರಘೋಷಗಳೊಂದಿಗೆ, ವಾದ್ಯಗೋಷ್ಠಿಗಳ ನಿನಾದದೊಂದಿಗೆ 11.22ರ ಕರ್ಕಾಟಕ ಲಗ್ನ ಸುಮೂಹೂರ್ತದಲ್ಲಿ  ನವವಧುವರರು ಹಸೆಮಣೆಯನ್ನೇರಿದರು. ಅತಿಥಿಗಳು, ಬಂಧುಮಿತ್ರರು, ಸಮಾರಂಭದಲ್ಲಿ ಭಾಗವಹಿಸಿದ ಜನರು ನೂತನ ವಧುವರರಿಗೆ ಶುಭಾಶಯ ಕೋರಿದರು.


ಬೆಳಿಗ್ಗೆ ವಧು-ವರರನ್ನು ಆಕರ್ಷಣೀಯ ದಿಬ್ಬಣ ಮೆರವಣಿಗೆಯೊಂದಿಗೆ ಸಭಾಂಗಣಕ್ಕೆ ಬರಮಾಡಿಸಲಾಯಿತು. ಸಭಾಂಗಣದಲ್ಲಿ ತುಳುನಾಡಿನ  ಸಾಂಪ್ರದಾಯಿಕ ಶೈಲಿಯಲ್ಲಿ ವಧುವರರನ್ನು ಸ್ವಾಗತಿಸಲಾಯಿತು.  ಬಳಿಕ ನಡೆದ ಸಭಾಕಾರ್ಯಕ್ರಮವನ್ನು 
ನವದೆಹಲಿ ಅನಾರೋಖ್ ಪ್ರೈ.ಲಿ.ನ ವೈಸ್ ಚೇಯರ್ ಮೆನ್ ಸಂತೋಷ್ ಜೆ.ಪಿ. ಉದ್ಘಾಟಿಸಿ ಮಾತನಾಡಿ ತುಂಗಪ್ಪ ಬಂಗೇರರ ಈ ಕಾರ್ಯ ಪುಣ್ಯದಾಯಕವಾಗಿದೆ. ಇಂತಹ ಸಮಾಜಮುಖಿ ಕಾರ್ಯದೊಂದಿಗೆ ನಾವು ಯಾವತ್ತೂ ಇದ್ದೇವೆ ಎಂದರು.  ಗುತ್ತಿಗೆದಾರ ಪ್ರವೀಣ್ ಎಸ್.ದರ್ಬೆ  ಮಂಗಲಸೂತ್ರ ವಿತರಿಸಿದರು.            ಕಾರ್ಯಕ್ರಮದ ನೇತೃತ್ವ ವಹಿಸಿದ್ದ, ಫ್ರೆಂಡ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರಾ ಮಾತನಾಡಿ ಕಳೆದ ಹದಿನೈದು ವರ್ಷಗಳಿಂದ ದಾನಿಗಳ ಸಹಕಾರದೊಂದಿಗೆ ಸಾಮೂಹಿಕ ವಿವಾಹವನ್ನು ನಡೆಸಿಕೊಂಡು ಬರಲಾಗಿದೆ. ಇದುವರೆಗೆ 462 ಜೋಡಿಗಳಿಗೆ ಕ್ಲಬ್ ವತಿಯಿಂದ ಮದುವೆ ನೆರವೇರಿಸಲಾಗಿದೆ ಎಂದರು.   

 

                           

*ಸ್ವಸ್ತಿಸಿರಿ ಪ್ರಶಸ್ತಿ ಪ್ರದಾನ*
ಜಿಲ್ಲಾ ವೆನ್ ಲಾಕ್ ಆಸ್ಪತ್ರೆಯ ವೈದ್ಯ ಡಾ.ಸದಾನಂದ ಪೂಜಾರಿ (ವೈದ್ಯಕೀಯ),  ವಿಜಯಕುಮಾರ್ ಕೊಡಿಯಾಲ್ ಬೈಲ್( ಕಲಾಕ್ಷೇತ್ರ) ಹಾಗೂ ಕಡಬ ಶ್ರೀನಿವಾಸ ರೈ ( ಯಕ್ಷಗಾನ ಕ್ಷೇತ್ರ) ಇವರಿಗೆ ಸ್ವಸ್ತಿಸಿರಿ ರಾಜ್ಯ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಪರಿಸರದ ಪಂಚಾಯತ್ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರಿಗೆ, ಸಹಾಯಕಿಯರಿಗೆ, ಆಶಾ ಕಾರ್ಯಕರ್ತೆಯರಿಗೆ ಸ್ವಸ್ತಿಕ್ ಸಂಭ್ರಮ ಪುರಸ್ಕಾರ ನೀಡಿ ಗೌರವಿಸಲಾಯಿತು.                

   ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ವಿವಿಧ ಕ್ಷೇತ್ರಗಳ ಪ್ರಮುಖರಾದ ಸುದರ್ಶನ್ ಬಜ, ಕೆ.ಲಕ್ಷ್ಮೀನಾರಾಯಣ ಉಡುಪ, ಕರುಣಾಕರ ಪೂಜಾರಿ ಮಾಳಿಗೆಮನೆ, ಹರೀಶ್ ಪ್ರಭು, ರಮೇಶ್ ಶೆಟ್ಟಿ ಮಜಲೋಡಿ, ಗಿರೀಶ್ ಸಾಲ್ಯಾನ್ ಹೆಗ್ಗಡೆಬೆಟ್ಟುಗುತ್ತು, ದೀಪಕ್ ಕುಮಾರ್ ಜೆ.ಪಿ., ಹರಿಯಪ್ಪ ಮುತ್ತೂರು, ಶಿವಪ್ಪ ಗೌಡ, ರಂಜಿತ್ ಎಚ್.ಡಿ., ಬಬಿತಾ ದಿನೇಶ್, ಹರ್ಷಿಣಿ ಪುಷ್ಪಾನಂದ, ಲೋಕೇಶ್ ಆಚಾರ್ಯ, ಹೇಮಂತ್ ಕುಮಾರ್ ಮೊದಲಾದವರು ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.   ಮಾಜಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಭೇಟಿ ನೀಡಿ ಶುಭ ಹಾರೈಸಿದರು.            

   ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್  ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಸಂಚಾಲಕ  ರಾಜೇಶ್ ಬಂಗೇರ ಪುಳಿಮಜಲು, ಕಾರ್ಯದರ್ಶಿ ಜಯರಾಜ್ ಅತ್ತಾಜೆ ಮೊದಲಾದವರಿದ್ದರು. ಮಾಜಿ ಅಧ್ಯಕ್ಷ ಪ್ರಭಾಕರ ಪಿ.ಎಂ.ಸ್ವಾಗತಿಸಿ, ವಂದಿಸಿದರು. ಪತ್ರಕರ್ತ ಗೋಪಾಲ ಅಂಚನ್ ಕಾರ್ಯಕ್ರಮ ನಿರೂಪಿಸಿದರು. ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ವತಿಯಿಂದ ಸಂತೋಷ್ ಕುಮಾರ್ ಜೆ.ಪಿ.ಅವರಿಗೆ ಗೌರವ ಸಮರ್ಪಿಸಲಾಯಿತು. ವಿಶ್ವ ಹಿಂದೂ ಪರಿಷತ್ತು ಕುಕ್ಕಳ ಘಟಕದ ವತಿಯಿಂದ ಎಂ.ತುಂಗಪ್ಪ ಬಂಗೇರಾ ಅವರಿಗೆ ಗೌರವ ಸಮರ್ಪಣೆ ನಡೆಯಿತು. ಅಪರಾಹ್ನ ಬಳಿಕ ಪೆರ್ಡೂರು ಮೇಳದವರಿಂದ ಯಕ್ಷಗಾನ, ಸಂಜೆ ತಾಂಬೂಲ ಕಲಾವಿದರಿಂದ ತುಳು ನಾಟಕ ನಡೆಯಿತು.   

          
ವರದಿ:ಗೋಪಾಲ ಅಂಚನ್
ಸಂಪಾದಕರು:
ಯುವಧ್ವನಿ ನ್ಯೂಸ್ ಕರ್ನಾಟಕ
ಮೊ:9449104318