ಬಿ.ರಮಾನಾಥ ರೈ ಅವರು ಜನಪರವಾಗಿ ಕೆಲಸ ಮಾಡಿದ ಜನನಾಯಕರು, ಅಭಿವೃದ್ಧಿಯ ಹರಿಕಾರರು-ಪದ್ಮರಾಜ್ ಆರ್

ಬಂಟ್ವಾಳ: ಬಿ.ರಮಾನಾಥ ರೈ ಅವರು ಶಾಸಕರಾಗಿ, ಸಚಿವರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದವರು. ಅವರು ಜನಪರವಾಗಿ ಕೆಲಸ ಮಾಡಿದ ಜನನಾಯಕರು, ಅಭಿವೃದ್ಧಿಯ ಹರಿಕಾರರು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ರಾಮಯ್ಯ ಹೇಳಿದ್ದಾರೆ.


ಬಿ.ಸಿ.ರೋಡಿನ ಚುನಾವಣಾ ಪ್ರಚಾರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಮಾನಾಥ ರೈ ಅವರು ಹಲವಾರು ಶಾಶ್ವತ ಯೋಜನೆಗಳನ್ನು ಮಾಡಿದ್ದಲ್ಲದೆ ಬಂಟ್ವಾಳ ವಿಧಾನಸಭಾ ಕ್ಷೇತ್ರವನ್ನು ಅಭಿವೃದ್ಧಿಯಲ್ಲಿ ರಾಜ್ಯಕ್ಕೆ ಮಾದರಿಯಾಗಿ ರೂಪಿಸಿದವರು ಎಂದರು.
ಬಿಲ್ಲವ ಸಮುದಾಯ ಸಹಿತ ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಯಲ್ಲಿ ರೈ ಅವರ ಕೊಡುಗೆ ಅಪಾರವಾದುದು. ರೈಯವರ ಮೇಲೆ ಜನತೆಗೆ ವಿಶೇಷ ಒಲವಿದೆ. ಅವರು ಪ್ರಚಂಡ ಬಹುಮತದಿಂದ ಚುನಾಯಿತರಾಗುತ್ತಾರೆ ಎಂದು ಪದ್ಮರಾಜ್ ಹೇಳಿದರು.

ಬಿಜೆಪಿ ಹಿಂದುಳಿದ ವರ್ಗಗಳ ಹಿತವನ್ನು ಕಡೆಗಣಿಸಿದೆ:

ನಾರಾಯಣ ಗುರುಗಳು, ಕುವೆಂಪು, ಬಸವಣ್ಣನಂತವರ ವಿಚಾರಧಾರೆಯನ್ನು ಪಠ್ಯಪುಸ್ತಕದಿಂದ ಕೈ ಬಿಡುವ ಮೂಲಕ ಸಾಮಾಜಿಕ ಸಾಮರಸ್ಯವನ್ನು ಸಾಧಿಸಿದವರ ಮೇಲೆ ಬಿಜೆಪಿ ಅಗೌರವ ತೋರಿದೆ. ಗಣರಾಜ್ಯೋತ್ಸವ ಪೆರೆಡ್ ನಲ್ಲಿ ನಾರಾಯಣ ಗುರುಗಳ ಟ್ಯಾಬ್ಲೋವನ್ನು ತಿರಸ್ಕರಿಸುವ ಮೂಲಕ ಗುರುಗಳನ್ನು ಅವಮಾನಿಸಲಾಗಿದೆ. ಜಾತಿ, ಧರ್ಮದ ಆಧಾರದಲ್ಲಿ ಜನರನ್ನು ವಿಭಜಿಸುವ ಮೂಲಕ ಬಿಜೆಪಿ ಹಿಂದುಳಿದ ವರ್ಗದ ಮೇಲೆ ಶೋಷಣೆ ನಡೆಸುವುದಲ್ಲದೆ ಹಿಂದುಳಿದ ವರ್ಗದ ಹಿತವನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಇದರಿಂದಾಗಿ ಜನತೆ ಜಾಗೃತರಾಗಿದ್ದು ಬಿಜೆಪಿಗೆ ಈ ಬಾರಿ ಸೂಕ್ತವಾದ ಉತ್ತರ ನೀಡಲಿದ್ದಾರೆ ಎಂದು ಪದ್ಮರಾಜ್ ರಾಮಯ್ಯ ಹೇಳಿದರು.

ಕಾಂಗ್ರೇಸ್ ಸರ್ವರ ಹಿತವನ್ನು ಕಾಪಾಡಿದೆ:

ಸರ್ವವನ್ನೂ ತ್ಯಾಗ ಮಾಡಿ ದೇಶ ಕಟ್ಟಿದ ಪಕ್ಷ ಕಾಂಗ್ರೇಸ್. ಸಹೋದರತೆ, ಸಾಮರಸ್ಯದ ನೆಲೆಗಟ್ಟಿನಲ್ಲಿ ದೇಶ ವಿಶ್ವಗುರು ಆಗಬೇಕು. ಎಲ್ಲರನ್ನೂ ಸಮಾನವಾಗಿ ಗೌರವಿಸುವ, ಸರ್ವರ ಹಿತವನ್ನು ಕಾಯುವ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬರಬೇಕಾದ ಅನಿವಾರ್ಯತೆ ಈ ರಾಜ್ಯಕ್ಕಿದೆ. ಕಾಂಗ್ರೇಸ್ ಅತ್ಯಧಿಕ ಸ್ಥಾನಗಳೊಂದಿಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ದೇಶಕ್ಕೆ ಮಾದರಿಯಾದ ಆಡಳಿತ ನೀಡಲಿದೆ ಎಂದು ಪದ್ಮರಾಜ್ ರಾಮಯ್ಯ ಹೇಳಿದರು.
ಕೆಪಿಸಿಸಿ ಸದಸ್ಯ ಪಿಯೂಸ್ ಎಲ್.ರೋಡ್ರಿಗಸ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಪಕ್ಷದ ಪ್ರಮುಖರಾದ
ಸಂಜೀವ ಪೂಜಾರಿ ಬೊಳ್ಳಾಯಿ, ಮಾಯಿಲಪ್ಪ ಸಾಲ್ಯಾನ್, ಜಯಂತಿ ವಿ.ಪೂಜಾರಿ, ಜಗದೀಶ ಕೊಯಿಲ, ವಾಸು ಪೂಜಾರಿ ಲೊರೆಟ್ಟೊ, ತಿಮ್ಮಪ್ಪ ಪೂಜಾರಿ ಕುಕ್ಕಿಪ್ಪಾಡಿ, ಉಮೇಶ ಸಪಲ್ಯ ಬೋಳಂತೂರು, ಉಮೇಶ್ ಕುಲಾಲ್ ನಾವೂರು, ಸುಭಾಶ್ಚಂದ್ರ ಶೆಟ್ಟಿ ಕೊಳ್ನಾಡು, ಜೋಸ್ಮಿನ್ ಡಿಸೋಜ, ರಿಯಾಜ್ ಹುಸೈನ್ ಮೊದಲಾದವರು ಸುದ್ದಿಗೋಷ್ಠಿಯಲ್ಲಿದ್ದರು.

ಯುವಧ್ವನಿ ನ್ಯೂಸ್ ಕರ್ನಾಟಕ