ಶಾಂತಿಯುತ, ಅಭಿವೃದ್ಧಿಶೀಲ ಬಂಟ್ವಾಳಕ್ಕಾಗಿ ರಾಜೇಶ್ ನಾಯ್ಕ್ ಅವರನ್ನು ಜನತೆ ಬಹುಮತದಿಂದ ಆರಿಸುತ್ತಾರೆ-ಕೃಷ್ಣದಾಸ್

ಬಂಟ್ವಾಳ: ಕೋಮುಸೂಕ್ಷ್ಮ ಪ್ರದೇಶವಾಗಿ ಹೆಸರಾಗಿದ್ದ ಬಂಟ್ವಾಳದಲ್ಲಿ ಕಳೆದ ಐದು ವರ್ಷಗಳಲ್ಲಿ ಯಾವುದೇ ಕೋಮುಗಲಭೆಗಳು ನಡೆದಿಲ್ಲ. 144 ಸೆಕ್ಷನ್ ವಿಧಿಸಿಲ್ಲ. ಜನತೆ ಶಾಂತಿ, ನೆಮ್ಮದಿಯಿಂದ ಬದುಕುವ ವಾತಾವರಣ ಸೃಷ್ಠಿಯಾಗಿದೆ. ಜತೆಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಗ್ರವಾಗಿ ಅಭಿವೃದ್ಧಿ ಕಂಡಿದೆ. ಅದ್ದರಿಂದ ಶಾಂತಿಯುತ ಮತ್ತು ಅಭಿವೃದ್ಧಿಶೀಲ ಬಂಟ್ವಾಳಕ್ಕಾಗಿ ಕ್ಷೇತ್ರದ ಜನತೆ ರಾಜೇಶ್ ನಾಯ್ಕ್ ಅವರನ್ನು ಬಹುಮತದಿಂದ ಆರಿಸುತ್ತಾರೆ ಎಂದು ಕೇರಳ ಬಿಜೆಪಿಯ ಖಚಾಂಚಿ ಕೃಷ್ಣದಾಸ್ ಹೇಳಿದ್ದಾರೆ.
ಬಿ.ಸಿ.ರೋಡಿನ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ಅವರು ಕ್ಷೇತ್ರದಲ್ಲಿ ಅಪಾರ ಪ್ರಮಾಣದಲ್ಲಿ ರಸ್ತೆ, ಕುಡಿಯುವ ನೀರು ಸಹಿತ ಸಕಲ ಮೂಲಭೂತ ಸೌಲಭ್ಯಗಳನ್ನು ಒದಗಿಸಿದ ರಾಜೇಶ್ ನಾಯ್ಕ್ ಅವರ ಗೆಲುವು ನಿಶ್ಚಿತವಾಗಿದೆ ಎಂದರು.


ಕಳೆದ ಅವಧಿಯಲ್ಲಿ ರಾಜೇಶ್ ನಾಯ್ಕ್ ಪ್ರಾಮಾಣಿಕವಾಗಿ ತನ್ನ ಜವಾಬ್ಧಾರಿಯನ್ನು ನಿರ್ವಹಿಸಿದ್ದಾರೆ. ಸರಳತೆ, ಸಜ್ಜನಿಕೆಯ ಸ್ನೇಹಜೀವಿಯಾಗಿ ಅವರು ಜನರ ಪ್ರೀತ್ಯಾದರಗಳಿಗೆ ಪಾತ್ರರಾಗಿದ್ದಾರೆ ಎಂದು ಕೃಷ್ಣದಾಸ್ ಹೇಳಿದರು.
ರಾಜ್ಯದಲ್ಲಿ ಬಿಜೆಪಿಯು ತಳಮಟ್ಟದ, ಸಾಮಾನ್ಯ ಕಾರ್ಯಕರ್ತರಿಗೆ, ಅತೀ ಹೆಚ್ಚು ಹೊಸಮುಖಗಳಿಗೆ ಸ್ಪರ್ಧಿಸಲು ಅವಕಾಶ ನೀಡಿದೆ. ರಾಜ್ಯದಲ್ಲಿ ಬಿಜೆಪಿ ಅತ್ಯದಿಕ ಸ್ಥಾನಗಳನ್ನು ಪಡೆದು ಅಧಿಕಾರ ಚುಕ್ಕಾಣಿ ಹಿಡಿಯಲಿದೆ. ಬಿಜೆಪಿ ಎಸ್ಡಿಪಿಐ ಸಹಿತ ರಾಷ್ಟ್ರದ್ರೋಹಿ ಪಕ್ಷಗಳೊಂದಿಗೆ ಯಾವತ್ತೂ ಕೈಜೋಡಿಸುವುದಿಲ್ಲ. ಕಾಂಗ್ರೇಸ್ ರಾಷ್ಟ್ರದ್ರೋಹಿಗಳನ್ನು ಸ್ಟಾರ್ ಪ್ರಚಾರಕರನ್ನಾಗಿ ಆಹ್ವಾನಿಸುತ್ತಿದೆ ಎಂದು ಕೃಷ್ಣದಾಸ್ ಆರೋಪಿಸಿದರು.

ಗೆಲುವಿಗಾಗಿ ಸಕಲ ಸಿದ್ಧತೆ ನಡೆಯುತ್ತಿದೆ-ದೇವಪ್ಪ ಪೂಜಾರಿ

ಬಿಜೆಪಿ ಬಂಟ್ವಾಳ ಮಂಡಲ ಅಧ್ಯಕ್ಷ ದೇವಪ್ಪ ಪೂಜಾರಿ ಬಾಳಿಕೆ ಮಾತನಾಡಿ ಬಂಟ್ವಾಳದಲ್ಲಿ ಚುನಾವಣಾ ಸಿದ್ಧತೆ ಬಿರುಸಿನಿಂದ ನಡೆಯುತ್ತಿದೆ. ನಮ್ಮ ಅಭ್ಯರ್ಥಿ ಗೆಲ್ಲುವ ನಿಟ್ಟಿನಲ್ಲಿ ಸಮಾರೋಪಾದಿಯಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಸಜ್ಜುಗೊಳಿಸಲಾಗಿದೆ. ಎಪ್ರಿಲ್ 30 ರಂದು ಪ್ರತಿ ಬೂತ್ ಮಟ್ಟದಲ್ಲಿ ಮಹಾ ಅಭಿಯಾನ ನಡೆಯಲಿದೆ. ರಾಜ್ಯ, ಅಂತರ್ ರಾಜ್ಯ, ರಾಷ್ಟ್ರಮಟ್ಟದ ನಾಯಕರು ಚುನಾವಣಾ ಪ್ರಚಾರಕ್ಕಾಗಿ ಆಗಮಿಸುತ್ತಿದ್ದಾರೆ. ರಾಜೇಶ್ ನಾಯ್ಕ್ ಅವರು 25 ಸಾವಿರದಿಂದ 30 ಸಾವಿರದ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದರು‌.
ಅಭ್ಯರ್ಥಿ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಕೇರಳದ ಬಿಜೆಪಿ ಮುಖಂಡ ಹರಿದಾಸ್, ಚುನಾವಣಾ ಪ್ರಭಾರಿ ರವಿಶಂಕರ ಮಿಜಾರು, ಜಿಲ್ಲಾ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಸಂಚಾಲಕ ದೇವದಾಸ್ ಶೆಟ್ಟಿ ಬಂಟ್ಚಾಳ, ಪ್ರಧಾನ ಕಾರ್ಯದರ್ಶಿಗಳಾದ ರವೀಶ ಶೆಟ್ಟಿ, ಡೊಂಬಯ ಅರಳ, ನವೀನ್ ಕುಮಾರ್, ಕಾರ್ಯದರ್ಶಿ ಪುರುಷೋತ್ತಮ ಶೆಟ್ಟಿ ಬಾರೆಕ್ಕಿನಡೆ, ಮಾಧ್ಯಮ ಪ್ರಮುಖ್ ರಂಜಿತ್ ಮೈರಾ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

ಯುವಧ್ವನಿ ನ್ಯೂಸ್ ಕರ್ನಾಟಕ