ಬಂಟ್ಚಾಳ ವರ್ತಕರ ವಿವಿಧೋದ್ಧೇಶ ಸಹಕಾರಿ ಸಂಘ 20ನೇ ವರ್ಷಕ್ಕೆ ಪಾದಾರ್ಪಣೆ-ರೂ.92.60ಲಕ್ಷ ನಿವ್ವಳ ಲಾಭ

ಬಂಟ್ವಾಳ: ಬಂಟ್ವಾಳ ವರ್ತಕರ ವಿವಿಧೋದ್ಧೇಶ ಸಹಕಾರಿ ಸಂಘವು ರೂ.92.60 ಲಕ್ಷ ನಿವ್ವಳ ಲಾಭದೊಂದಿಗೆ ಸಾಧನೆಯ ಹಾದಿಯಲ್ಲಿ ಮುನ್ನಡೆಯುತ್ತಿದ್ದು ಇದೀಗ ಇಪ್ಪತ್ತನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ ಎಂದು ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಜೈನ್ ತಿಳಿಸಿದ್ದಾರೆ.


ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಂಘದ ಕಾರ್ಯಸಾಧನೆಗಳ ಬಗ್ಗೆ ವಿವರಣೆ ನೀಡಿದರು.
2003ರಲ್ಲಿ ಬಂಟ್ವಾಳ ಬೈಪಾಸ್ ನಲ್ಲಿ 20ಮಂದಿ ಚಿಕ್ಕ ವ್ಯಾಪಾರಸ್ಥರಿಂದ ಪ್ರವರ್ತಿತವಾದ ಈ ಸಂಸ್ಥೆ 460 ಸದಸ್ಯರೊಂದಿಗೆ, ರೂ.4.02 ಲಕ್ಷ ಪಾಲು ಬಂಡವಾಳದೊಂದಿಗೆ, ಸುಮಾರು 2ಲಕ್ಷ ಠೇವಣಿಯೊಂದಿಗೆ ಸಹಕಾರಿ ಕ್ಷೇತ್ರದಲ್ಲಿ ವಿವಿಧ ಉದ್ಧೇಶಗಳನ್ನಿಟ್ಟುಕೊಂಡು ಕಾರ್ಯಾರಂಭಿಸಿತ್ತು. ಇದೀಗ ಸಂಘವು ಹಂತಹಂತವಾಗಿ ಮುನ್ನಡೆದು ದ್ವಿದಶ ಸಂಭ್ರಮದಲ್ಲಿದೆ ಎಂದು ಜೈನ್ ಹೇಳಿದರು.

ಪೆರ್ನೆಯಲ್ಲಿ ಹೊಸ ಶಾಖೆ:

ಕಳೆದ ವರ್ಷ ಸಂಘವು ವ್ಯವಹಾರವನ್ನು ಜಿಲ್ಲಾ ಮಟ್ಟಕ್ಕೆ ವಿಸ್ತರಿಸಿದ್ದು ಬೆಳ್ತಂಗಡಿಯ ಕಲ್ಲೇರಿ, ಮೂಡಬಿದ್ರೆಯ ಆಲಂಗಾರು ಶಾಖೆ ಸೇರಿದಂತೆ ಒಟ್ಟು 12 ಶಾಖೆಗಳು ಕಾರ್ಯನಿರ್ವಹಿಸುತ್ತಿದೆ. ಮೇ ತಿಂಗಳಲ್ಲಿ ಬಂಟ್ಚಾಳ ತಾಲೂಕಿನ ಪೆರ್ನೆಯಲ್ಲಿ 13ನೇ ಶಾಖೆಯು ಕಾರ್ಯಾರಂಭಿಸಲಿದೆ ಎಂದರು.
ಇಪ್ಪತ್ತನೇ ವರ್ಷದ ಈ ಸುಸಂದರ್ಭದಲ್ಲಿ ಸಂಘವು 5978 ಸದಸ್ಯರನ್ನು ಹೊಂದಿದ್ದು 20 ಸಾವಿರಕ್ಕೂ ಹೆಚ್ಚು ಗ್ರಾಹಕರಿದ್ದಾರೆ. 1.45 ಕೋಟಿ ಪಾಲು ಬಂಡವಾಳ, 1.98 ಕೋಟಿ ಕ್ಷೇಮ ನಿಧಿ, 52.54 ಕೋಟಿ ಠೇವಣಿ, 55ಕೋಟಿ ದುಡಿಯುವ ಬಂಡವಾಳ, 47.73 ಕೋಟಿ ಹೊರಬಾಕಿ ಸಾಲದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಸಂಘವು ಮಾವಿನಕಟ್ಟೆ ಮತ್ತು ಬೆಂಜನಪದವಿನಲ್ಲಿ ಸ್ವಂತ ಕಟ್ಟಡ ಹೊಂದಿದ್ದು 85.95 ಲಕ್ಷ ಕ್ಷೇಮ ನಿಧಿಯನ್ನು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಲ್ಲಿ ಖಾಯಂ ಠೇವಣಿಯಾಗಿ ಇರಿಸಲಾಗಿದೆ.
ಸಂಘದಲ್ಲಿ 24 ಜನ ಖಾಯಂ ಸಿಬ್ಬಂದಿಗಳು, 14 ಜನ ಗುತ್ತಿಗೆ ಆಧಾರದ ಸಿಬ್ಬಂದಿಗಳು ಹಾಗೂ 15 ಮಂದಿ ಪಿಗ್ಮಿ ಸಂಗ್ರಾಹಕರು ಉತ್ತಮ ಕಾರ್ಯಕ್ಷಮತೆಯೊಂದಿಗೆ ಕರ್ತವ್ಯ ನಿರತರಾಗಿದ್ದಾರೆ ಎಂದು ಸುಭಾಶ್ಚಂದ್ರ ಜೈನ್ ತಿಳಿಸಿದರು.

ಡಿಸೆಂಬರಿನಲ್ಲಿ ದ್ವಿದಶ ಸಂಭ್ರಮ

ಸಂಸ್ಥೆಗೆ ಇಪ್ಪತ್ತು ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಡಿಸೆಂಬರ್ ತಿಂಗಳಿನಲ್ಲಿ ದ್ವಿದಶ ಸಂಭ್ರಮವನ್ನು ಅವಿಸ್ಮರಣೀಯವಾಗಿ ಆಯೋಜಿಸಲಾಗುವುದು. ಇದರಂಗವಾಗಿ ಸಹಕಾರಿ ಕ್ಷೇತ್ರದ ಸಾಧಕರಿಗೆ ಗೌರವಾರ್ಪಣೆ, ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡವರಿಗೆ ಹಾಗೂ ಸಿಬ್ಬಂದಿಗಳಿಗೆ ವಿವಿಧ ಸ್ಪರ್ಧೆಗಳು ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಸುಭಾಶ್ಚಂದ್ರ ಜೈನ್ ತಿಳಿಸಿದರು.

ಉಪಾಧ್ಯಕ್ಷ ಮಂಜುನಾಥ ರೈ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಿತ್ ಕುಮಾರ್ ಜೈನ್, ನಿರ್ದೇಶಕರುಗಳಾದ ಸ್ವಪ್ನರಾಜ್, ರಾಜೇಶ್ ಬಿ., ಜೆ.ಗಜೇಂದ್ರ ಪ್ರಭು, ದಿವಾಕರ ದಾಸ್, ವಿಜಯ ಕುಮಾರಿ ಇಂದ್ರ, ಸುಧಾಕರ ಸಾಲ್ಯಾನ್, ಮೈಕಲ್ ಡಿ.ಕೋಸ್ತ, ಹೇಮಂತ್ ಕುಮಾರ್ ಜೈನ್, ರವೀಂದ್ರ, ನಾರಾಯಣ ಸಿ.ಪೆರ್ನೆ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ವರದಿ: ಗೋಪಾಲ ಅಂಚನ್
ಸಂಪಾದಕರು:
ಯುವಧ್ವನಿ ನ್ಯೂಸ್ ಕರ್ನಾಟಕ
ಮೊ:9449104318