ಮಾರ್ಚ್ 10 ರಿಂದ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಪ್ರಜಾಧ್ವನಿ ಯಾತ್ರೆ

ಬಂಟ್ವಾಳ: ಮಾರ್ಚ್ 10 ರಿಂದ 23 ರವರೆಗೆ 14 ದಿನಗಳ ಕಾಲ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ “ಬಂಟ್ವಾಳ ಪ್ರಜಾಧ್ವನಿ ಯಾತ್ರೆ” ಯನ್ನು ಆಯೋಜಿಸಲಾಗಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.

ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರತಿದಿನ ಮೂರು ಪಂಚಾಯತ್ ವ್ಯಾಪ್ತಿಯಲ್ಲಿ ಯಾತ್ರೆ ನಡೆಯಲಿದೆ. ತಮ್ಮ ಅವಧಿಯಲ್ಲಿ ನಡೆದಿರುವ ಅಭೂತಪೂರ್ವ ಅಭಿವೃದ್ಧಿ ಯೋಜನೆಗಳ ಪೈಕಿ ಪ್ರಮುಖ ಯೋಜನೆಗಳ ಬಗ್ಗೆ ಯಾತ್ರೆಯ ಮೂಲಕ ಜನತೆಗೆ ಮಾಹಿತಿ ನೀಡಲಾಗುವುದು. ಪ್ರಜಾಧ್ವನಿ ಯಾತ್ರೆಯ ಯಶಸ್ವಿಗಾಗಿ ಪ್ರತೀ ಪಂಚಾಯತ್ ಮಟ್ಟದಲ್ಲಿ ವ್ಯಾಪಕ ಸಿದ್ಧತೆ ನಡೆಯುತ್ತಿದೆ ಎಂದರು‌.

ಪ್ರತಿ ದಿನ ಬೆಳಿಗ್ಗೆ 9 ಗಂಟೆಗೆ ಯಾತ್ರೆ ಆರಂಭಗೊಳ್ಳಲಿದ್ದು ಸಂಜೆ 6 ಗಂಟೆಗೆ ಸಮಾಪ್ತಿಯ ಸಂದರ್ಭದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಈ ಸಭಾ ಕಾರ್ಯಕ್ರಮದಲ್ಲಿ ಪಕ್ಷದ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ ಎಂದು ರಮಾನಾಥ ರೈ ಹೇಳಿದರು.

ಪ್ರಜಾಧ್ವನಿ ಯಾತ್ರೆಯ ಸಂಚಾಲಕ ಪಿಯೂಸ್ ಎಲ್ ರೊಡ್ರಿಗಸ್ ಯಾತ್ರೆಯ ಬಗ್ಗೆ ವಿವರ ನೀಡಿದರು.

ಮಾರ್ಚ್ 10 ರಂದು ಬೆಳಿಗ್ಗೆ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ, ಪೂಜೆ ಸಲ್ಲಿಸಿದ ಬಳಿಕ ಯಾತ್ರೆಯು ಬೆಳಿಗ್ಗೆ 9 ಪುಂಚಮೆಯಲ್ಲಿ ಆರಂಭಗೊಂಡು ಸಂಜೆ 6 ಗಂಟೆಗೆ ಬಡಕಬೈಲಿನಲ್ಲಿ ಸಮಾಪನಗೊಳ್ಳಲಿದೆ.

ಮಾರ್ಚ್ 11ರಂದು ಕಳ್ಳಿಗೆಯಲ್ಲಿ ಆರಂಭ- ರಾಯಿಯಲ್ಲಿ ಸಮಾಪನ, ಮಾರ್ಚ್ 12ರಂದು ಕರ್ಪೆಯಲ್ಲಿ ಆರಂಭ- ವಾಮದಪದವಿನಲ್ಲಿ ಸಮಾಪನ, ಮಾರ್ಚ್ 13ರಂದು ಇರ್ವತ್ತೂರಿನಲ್ಲಿ ಆರಂಭ- ಪಾಂಡವರಕಲ್ಲಿನಲ್ಲಿ ಸಮಾಪನ, ಮಾರ್ಚ್ 14 ರಂದು ಉಳಿಯಲ್ಲಿ ಆರಂಭ- ಮಾವಿನಕಟ್ಟೆಯಲ್ಲಿ ಸಮಾಪನ, ಮಾರ್ಚ್ 15ರಂದು ನಾವೂರಿನಲ್ಲಿ ಆರಂಭ-ಕಾವಳಕಟ್ಟೆಯಲ್ಲಿ ಸಮಾಪನ, ಮಾರ್ಚ್ 16ರಂದು ಪಂಜಿಕಲ್ಲಿನಲ್ಲಿ ಆರಂಭ-ಲೊರೆಟ್ಟೊಪದವಿನಲ್ಲಿ ಸಮಾಪನ, ಮಾರ್ಚ್ 17ರಂದು ಮೊಡಂಕಾಪಿನಲ್ಲಿ ಆರಂಭ-ಬೋಗೋಡಿಯಲ್ಲಿ ಸಮಾಪನ, ಮಾರ್ಚ್ 18ರಂದು ಸಜಿಪಮುನ್ನೂರಿನಲ್ಲಿ ಆರಂಭ-ಬೊಳ್ಳಾಯಿಯಲ್ಲಿ ಸಮಾಪನ, ಮಾರ್ಚ್ 19ರಂದು ಸಾಲೆತ್ತೂರಿನಲ್ಲಿ ಆರಂಭ-ಕನ್ಯಾನದಲ್ಲಿ ಸಮಾಪನ, ಮಾರ್ಚ್ 20ರಂದು ವಿಟ್ಲಪಡ್ನೂರಿನಲ್ಲಿ ಆರಂಭ-ಮಂಚಿಯಲ್ಲಿ ಸಮಾಪನ, ಮಾರ್ಚ್ 21ರಂದು ಬೋಳಂತೂರಿನಲ್ಲಿ ಆರಂಭ-ಮಂಗಿಲಪದವಿನಲ್ಲಿ ಸಮಾಪನ, ಮಾರ್ಚ್ 22ರಂದು ಅನಂತಾಡಿಯಲ್ಲಿ ಆರಂಭ-ಮಾಣಿಯಲ್ಲಿ ಸಮಾಪನ, ಮಾರ್ಚ್ 23ರಂದು ಯಾತ್ರೆಯು ಬರಿಮಾರಿನಲ್ಲಿ ಆರಂಭಗೊಂಡು ಮೊಗರ್ನಾಡಿನಲ್ಲಿ ಸಮಾಪನಗೊಳ್ಳಲಿದೆ ಎಂದು ಪಿಯೂಸ್ ಎಲ್.ರೊಡ್ರಿಗಸ್ ವಿವರಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಪಕ್ಷದ ಪ್ರಮುಖರಾದ ಚಂದ್ರಪ್ರಕಾಶ್ ಶೆಟ್ಟಿ, ಮಾಯಿಲಪ್ಪ ಸಾಲ್ಯಾನ್, ಸುದರ್ಶನ್ ಜೈನ್, ಅಬ್ಬಾಸ್ ಅಲಿ, ಸುರೇಶ್ ಪೂಜಾರಿ ಜೋರಾ, ಮಧುಸೂಧನ್ ಶೆಣೈ ಮೊದಲಾದವರು ಸುದ್ದಿಗೋಷ್ಠಿಯಲ್ಲಿದ್ದರು.

ವರದಿ:ಗೋಪಾಲ ಅಂಚನ್
ಸಂಪಾದಕರು:
ಯುವಧ್ವನಿ ನ್ಯೂಸ್ ಕರ್ನಾಟಕ
ಮೊ:9449104318