ಕಜೆಕೋಡಿ ಶ್ರೀ ಉಮಾಮಹೇಶ್ವರ ಸಪರಿವಾರ ದೇವಸ್ಥಾನ ಫೆ 13 ಮತ್ತು ಫೆ.14ರಂದು ಬ್ರಹ್ಮಕಲಶಾಭಿಷೇಕ ಸಂಭ್ರಮ

ಬಂಟ್ವಾಳ: ತಾಲೂಕಿನ ಮೂಡುಪಡುಕೋಡಿ ಗ್ರಾಮದ ಕಜೆಕೋಡಿ ಶ್ರೀ ಉಮಾಮಹೇಶ್ವರ ಸಪರಿವಾರ ದೇವಸ್ಥಾನವು ಬ್ರಹ್ಮಕಲಶಾಭಿಷೇಕದ ಸಂಭ್ರಮದಲ್ಲಿದೆ.
ಕಜೆಕೋಡಿ ಎಂಬ ಪ್ರಕೃತಿ ರಮಣೀಯ ಸುಂದರ ಪರಿಸರದಲ್ಲಿ ಸುಮಾರು ಒಂದು ಕೋ.ರೂ.ವೆಚ್ಚದಲ್ಲಿ ಸರ್ವಾಂಗ ಸುಂದರವಾಗಿ ನಿರ್ಮಾಣಗೊಂಡಿರುವ ಶ್ರೀ ದೇಗುಲದಲ್ಲಿ ಬ್ರಹ್ಮಕಲಶಾಭಿಷೇಕಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ.
ವೇ.ಮೂ.ನಡ್ವಂತಾಡಿ ಬಾಲಕೃಷ್ಣ ಪಾಂಗಣ್ಣಾ ಯ ಅವರ ನೇತೃತ್ವದಲ್ಲಿ, ಕ್ಷೇತ್ರದ ಅರ್ಚಕ ಗೋಪಾಲಕೃಷ್ಣ ಆಚಾರ್ಯ ಸನಂಗುಳಿ ಮತ್ತು ಅರ್ಚಕ ವೃಂದದಿಂದ ಫೆ.13 ಮತ್ತು 14 ರಂದು ದೇವರ ಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕವು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಳ್ಳಲಿದೆ.

ಕ್ಷೇತ್ರದ ಹಿನ್ನೆಲೆ:
ಪುರಾತನ ಕಾಲದಲ್ಲಿ ಲಿಂಗಾಯಿತರಿಂದ ಆರಾಧಿಸಲ್ಪಡುತ್ತಿದ್ದ ದೇವಸ್ಥಾನವು ಕಾಲಾನಂತರದಲ್ಲಿ ಬ್ರಾಹ್ಮಣರಿಗೆ ಕ್ರಯ,ವಿಕ್ರಯದಲ್ಲಿ ನೀಡಲ್ಪಟ್ಟ ಶಿವ ಸಾನಿಧ್ಯವೆಂದು ಎಂದು ಇತಿಹಾಸವಿದ್ದು ಪಂಚಾಯತಿ ಪದ್ಧತಿಯಂತೆ ಈ ಕ್ಷೇತ್ರ ಪೂಜಿಸಲ್ಪಡುತ್ತಿತ್ತು ಎಂಬುದು ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಿದೆ. ಕಾಲ ಕ್ರಮೇಣ ಈ ಕ್ಷೇತ್ರ ಭೂಗರ್ಭ ಸೇರಿಕೊಂಡಿದ್ದರೂ ಇಲ್ಲಿ ಕ್ಷೇತ್ರವಿದ್ದ ಕುರುಹುಗಳು ಗೋಚರಿಸುತ್ತಿತ್ತು. ಈ ಹಿನ್ನೆಲೆಯಲ್ಲಿ ಊರ ಭಕ್ತಾದಿಗಳು ಸೇರಿ ಜೀರ್ಣೋದ್ಧಾರಕ್ಕೆ ಯೋಜನೆ ರೂಪಿಸಿದ್ದರು.
ಇಲ್ಲಿ  ಶಿವಲಿಂಗ ಸಹಿತ  ಪಾಣಿಪೀಠದ ಸುತ್ತ ಶ್ರೀ ಗಣಪತಿ,ಭದ್ರಕಾಳಿ,ವೀರಭದ್ರ ಇತ್ಯಾದಿ ಸಹದೇವರುಗಳು ನೆಲೆಯಾಗಿದ್ದು ಎಲ್ಲಾ ಶಕ್ತಿಗಳು ಒಂದೇ ಆಲಯದೊಳಗಿರುವುದು ಇಲ್ಲಿನ ವಿಶೇಷವಾಗಿದೆ.

ಆಡಳಿತ ಮಂಡಳಿ:

ಪ್ರಸ್ತುತ ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಯು.ಎಸ್.ಚಂದ್ರಶೇಖರ್ ಭಟ್,ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಶಂಕರ ಶೆಟ್ಟಿ ಬೆದ್ರಮಾರ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ.ಎಸ್.ರಾಮಕೃಷ್ಣ ಸನಂಗುಳಿ ಅವರ ನೇತೃತ್ವದಲ್ಲಿ  ಪದಾಧಿಕಾರಿಗಳು, ವಿವಿಧ ಉಪಸಮಿತಿಗಳು ಹಾಗೂ ಕಾರ್ಯಕರ್ತರ ತಂಡ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದ ಯಶಸ್ವಿಯಲ್ಲಿ ತೊಡಗಿಸಿಕೊಂಡಿದೆ.

ಕಾರ್ಯಕ್ರಮ ವಿವರ:

ಫೆ.13 ರಂದು ಬೆಳಗ್ಗೆ ಕಲಾಬಾಗಿಲಿನಿಂದ  ಹೊರೆಕಾಣಿಕೆ ಮೆರವಣಿಗೆ, ಬಳಿಕ ವಿವಿಧ ವೈಧಿಕ ವಿಧಿ ವಿಧಾನಗಳು, ರಾತ್ರಿ
ಸ್ಥಳೀಯ ಮಕ್ಕಳು ಮತ್ತು
ಶ್ರೀ ಉಮಾಮಹೇಶ್ವರ ಗೆಳೆಯರ ಬಳಗದಿಂದ ಮನೋರಂಜನ ಕಾರ್ಯಕ್ರಮ ನಡೆಯಲಿದೆ.
ಫೆ.14 ರಂದು 8.57 ರ ಮೀನಲಗ್ನದಲ್ಲಿ ಶ್ರೀ ದೇವರ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ನಡೆಯಲಿದೆ. ಬೆಳಿಗ್ಗೆ ಶಾಸಕ ರಾಜೇಶ್ ನಾಯಕ್‌ ಅಧ್ಯಕ್ಷತೆಯಲ್ಲಿ ನಡೆಯುವ ಧಾರ್ಮಿಕ ಸಭೆಯಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.ಸಚಿವರುಗಳಾದ ಸುನೀಲ್ ಕುಮಾರ್,ಕೋಟ ಶ್ರೀನಿವಾಸ ಪೂಜಾರಿ,ಮಾಜಿ ಸಚಿವ ರಮಾನಾಥ ರೈ  ಸಹಿತ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.ಸಂಜೆ ವಿವಿಧ ಭಜನಾ ತಂಡದಿಂದ ಭಜನೆ,ರಾತ್ರಿ ಸುಡುಮದ್ದು ಪ್ರದರ್ಶನ, ಕುಳಾಯಿ ಕಲಾಕುಂಭ ಸಾಂಸ್ಕ್ರತಿಕ ವೇದಿಕೆಯವರಿಂದ ತುಳುನಾಡ ಸಂಸ್ಕ್ರತಿ, ಕಾರ್ಕಳ ಕಂಬ್ಲಗುಡ್ಡೆ ಓಂ ಶ್ರೀ ನಾಗಶಕ್ತಿ ಯಕ್ಷಗಾನ ಮಂಡಳಿಯವರಿಂದ ಅಜ್ಜನ ಪಜ್ಜೆ ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ.

ವರದಿ:
ಗೋಪಾಲ ಅಂಚನ್, ಆಲದಪದವು