ಸರಕಾರಿ ಶಾಲೆಗಳ ಅಭಿವೃದ್ಧಿಗೆ ಆಧ್ಯತೆ ನೀಡಿ-ರಮೇಶ್ ನಾಯಕ್ ರಾಯಿ

ಯುವಧ್ವನಿ ನ್ಯೂಸ್

ಬಂಟ್ವಾಳ: ಪ್ರಸ್ತುತ ದಿನಗಳಲ್ಲಿ ಸರಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿರುವುದು ಆಶಾದಾಯಕ ಬೆಳವಣಿಗೆ. ಸರಕಾರಿ ಶಾಲೆಗಳಿಗೆ ಇನ್ನೂ ಹೆಚ್ಚು ಒತ್ತು ನೀಡುವ ಕೆಲಸ ಆಗಬೇಕಾಗಿದೆ. ಗ್ರಾಮೀಣ ಭಾಗಗಳಲ್ಲಿ ಊರಿನವರ ಸಹಕಾರದೊಂದಿಗೆ ಸರಕಾರಿ ಶಾಲೆಯನ್ನು ಅಭಿವೃದ್ದಿ ಪಡಿಸುವ ಕೆಲಸಕ್ಕೆ ಹೆಚ್ಚು ಆಧ್ಯತೆ ನೀಡಬೇಕಾಗಿದೆ ಎಂದು ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ, ರೋಟರಿ ಕ್ಲಬ್ ಲೊರೆಟ್ಟೊ ಹಿಲ್ಸ್‌ನ ಕಾರ್ಯದರ್ಶಿ ರಮೇಶ್ ನಾಯಕ್ ರಾಯಿ ಹೇಳಿದರು.


ಅವರು ಶಿಕ್ಷಕಿ ಭಾರತಿ ಶೇಷಪ್ಪ ಮೂಲ್ಯ ಅವರ ಮನವಿಯ ಮೇರೆಗೆ ಕೆಂಪುಗುಡ್ಡೆ ಬಳಿಯ ಕಿನ್ನಿಬೆಟ್ಟುವಿನ ದ.ಕ. ಜಿ.ಪಂ.ಹಿ. ಪ್ರಾ. ಶಾಲೆಯ ಮಕ್ಕಳಿಗೆ ರೋಟರಿ ಕ್ಲಬ್ ಲೊರೆಟ್ಟೊ ಹಿಲ್ಸ್ ವತಿಯಿಂದ ಕೊಡುಗೆಯಾಗಿ ನೀಡಿದ ಬರೆಯುವ ಪುಸ್ತಕಗಳನ್ನು ವಿತರಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಲಬ್‌ನ ಪೂರ್ವಾಧ್ಯಕ್ಷ ಪದ್ಮರಾಜ್ ಬಲ್ಲಾಳ್ ಮಾತನಾಡಿ ಮನುಕುಲದ ಸೇವೆಯೇ ರೋಟರಿ ಸಂಸ್ಥೆಯ ಧ್ಯೇಯ. ರೋಟರಿ ಸಂಸ್ಥೆ ಮಕ್ಕಳ ಶಿಕ್ಷಣ, ಆರೋಗ್ಯದ ದೃಷ್ಟಿಯಿಂದಲೂ ಕೆಲಸ ಮಾಡುತ್ತಿದೆ ಎಂದರು.


ರೋಟರಿ ಕ್ಲಬ್ ಲೊರೆಟ್ಟೊ ಹಿಲ್ಸ್‌ನ ಸದಸ್ಯರಾದ ರಾಮಚಂದ್ರ ಶೆಟ್ಟಿಗಾರ್, ಐವನ್ ಮಿನೇಜಸ್,ಜಯರಾಂ ಶೆಟ್ಟಿ, ಶಾಲಾ ಎಸ್‌ಡಿಎಂಸಿ ಉಪಾಧ್ಯಕ್ಷೆ ಸುಕೇತಾ ಉಪಸ್ಥಿತರಿದ್ದರು.
ಪ್ರಭಾರ ಮುಖ್ಯ ಶಿಕ್ಷಕಿ ಅನಿತಾ ಪ್ರಿಯ ಸ್ವಾಗತಿಸಿ, ವಂದಿಸಿದರು, ಸಹಶಿಕ್ಷಕಿ ಭಾರತಿ ಶೇಷಪ್ಪ ಮೂಲ್ಯ ಕಾರ್ಯಕ್ರಮ ನಿರೂಪಿಸಿದರು.