ವಿಶ್ವಭಾತೃತ್ವ ಸಮ್ಮೇಳನದಲ್ಲಿ ಮೇಳೈಯಿಸಿದ ವಿಶ್ವಗುರುವಿನ ವಚನ

ಯುವಧ್ವನಿ ವಿಶೇಷ

ಜಾತಿಭೇದಗಳು ಸಮಾಜದೊಳಗಿನ ಮಾನವನಿರ್ಮಿತ ಅಡ್ಡಗೋಡೆಗಳು. ಕಳೆದ ಹಲವಾರು ಶತಮಾನಗಳಿಂದ ನಮ್ಮಲ್ಲಿ ಪ್ರಗತಿಯುಂಟಾಗದೇ ಇರುವುದಕ್ಕೆ ಈ ಜಾತಿಭೇದಗಳೇ ಕಾರಣ. ಇವುಗಳನ್ನು ಹೋಗಲಾಡಿಸುವ ಸಲುವಾಗಿ ಕೆಲಸ ಮಾಡಬೇಕಾದುದು ಇಂದಿನ ತೀರಾ ಅಗತ್ಯ. ಮನುಷ್ಯರ ವೇಷ, ಭಾಷೆ, ಮತ ಯಾವುದೇ ಇರಲಿ ಅವರೆಲ್ಲಾ ಒಂದೇ ಜಾತಿಯವರು- ಇದು ಕೇರಳದ ಅದ್ವೈತಾಶ್ರಮದಲ್ಲಿ ನಡೆದ ವಿಶ್ವ ಭಾತ್ರತ್ವ ಸಮ್ಮೇಳನದಲ್ಲಿ ವಿಶ್ವಕಂಡ ಮಹಾಮಾನವತಾವಾದಿ, ಜಗದ್ಗುರು ಬ್ರಹ್ಮಶ್ರೀ ನಾರಾಯಣ ಗುರುವರ್ಯರು ಮಾಡಿದ ಅನುಗ್ರಹ ಭಾಷಣದ ತುಣುಕು.
ಹೌದು.. ಮಾನವೀಯತೆ- ಮಾನವಧರ್ಮದ ಬಗ್ಗೆ ತನ್ನ ಸಂದೇಶಗಳಿಂದಲೇ ಕಣ್ತೆರೆಸಿದವರು ಬ್ರಹ್ಮಶ್ರೀ ನಾರಾಯಣ ಗುರುಗಳು.
ಜಾತಿ, ಧರ್ಮದ ಬಗೆಗಿನ ಗುರುವರ್ಯರ ಸಂದೇಶ, ವಚನಗಳು ವಿಶ್ವಭಾತ್ರತ್ವ ಸಮ್ಮೇಳನದಲ್ಲಿನ ಅವರ ಅನುಗ್ರಹ ಭಾಷಣದ ಮೂಲಕ ಮತ್ತಷ್ಟು ನಮ್ಮನ್ನು ಸಹೋದರತೆ, ಸಮರಸದೆಡೆಗೆ ಪ್ರೇರೆಪಿಸುತ್ತದೆ.
ಗುರುಗಳ ಶಿಷ್ಯರಾದ ಸಹೋದರ ಅಯ್ಯಪ್ಪನ್ 1917ರಲ್ಲಿ ಚೆರಾಯಿಯಲ್ಲಿ ಸಹೋದರ ಸಂಘವನ್ನು ಸ್ಥಾಪಿಸುತ್ತಾರೆ. 1921ರ ಮೇ.15 ರಂದು ಅಖಿಲ ಕೇರಳ ಸಹೋದರ ಸಮಾಜದ ವಾರ್ಷಿಕೋತ್ಸವ ಆಲುವೆ ಅದ್ವೈತಾಶ್ರಮದಲ್ಲಿ ನಡೆಯುತ್ತದೆ. ವಿಶ್ವ ಭಾತ್ರತ್ವ ಸಮ್ಮೇಳನವೆಂದೇ ಹೆಸರಾದ ಈ ಕಾರ್ಯಕ್ರಮದ ಉದ್ಧೇಶವಿದ್ದದ್ದೇ ಜಾತಿಗಳ ನಡುವೆ ಇರುವ ಕಂದಕವನ್ನು ಹೋಗಲಾಡಿಸಿ ಪರಸ್ಪರ ಸಹಭಾಳ್ವೆ ನಡೆಸುವ ವಾತಾವರಣವನ್ನು ನಿರ್ಮಿಸುವುದು.
ನಾರಾಯಣ ಗುರುಗಳೇ ಈ ಸಮ್ಮೇಳನದ ಕೇಂದ್ರಬಿಂದು.
ಬೆಳಿಗ್ಗಿನ ಅವಧಿಯಲ್ಲಿ ತನ್ನ ಭಾಷಣದುದ್ದಕ್ಕೂ ಮಾನವನಿಂದ ಪ್ರಕೃತಿಯ ಮೇಲಾಗುವ ಅನಾಹುತದ ಬಗ್ಗೆ ಆತಂಕ ವ್ಯಕ್ತಪಡಿಸಿದ ಗುರುಗಳು ಪ್ರಕೃತಿಯನ್ನು ಉಳಿಸಿ ಬೆಳೆಸುವ ಬಗ್ಗೆ ಕರೆ ನೀಡಿದರು.
ಮಧ್ಯಾಹ್ನ ನಂತರದ ಸಭೆಯಲ್ಲಿ ಮಾತನಾಡಿದ ಗುರುಗಳು-” ಧರ್ಮವೆಂದರೆ ಸಾತ್ವಿಕ ಜೀವನ ವಿಧಾನವೆಂದರ್ಥ, ಈ ಜೀವನ ಪದ್ಧತಿಯನ್ನು ನಮ್ಮ ಹಿರಿಯರು ನಮಗೆ ಆಧ್ಯಾತ್ಮಿಕ ನೆಲೆಯಲ್ಲಿ ಹಾಕಿಕೊಟ್ಟರು. ಅವರವರ ದೃಷ್ಠಿ, ಪ್ರಕೃತಿ, ಅಭಿವೃದ್ಧಿಗೆ ತಕ್ಕುದಾಗಿ ನಮ್ಮ ಹಿರಿಯರು ತುಳಿದ ಆಧ್ಯಾತ್ಮಿಕ ಹಾದಿಗಳೇ ಮತಗಳೆನಿಸಿಕೊಂಡದ್ದು. ಈ ಎಲ್ಲಾ ಮತಗಳು ಸತ್ಯವನ್ನು ಕಂಡುಕೊಳ್ಳಲು ಯತ್ನಿಸಿದರೂ ಅವರವರು ತುಳಿದ ಮಾರ್ಗಗಳು ಬೇರೆ ಬೇರೆಯಾಗಿರುವುದರಿಂದ ಅವರವರ ಆಚರಣೆಗಳು, ಪದ್ಧತಿಗಳು ಬೇರೆ ಬೇರೆಯಾದವು. ಆದರೆ ಎಲ್ಲಾ ಮತಗಳು ಸತ್ಯದ ಒಂದೊಂದು ಅಂಶವನ್ನು ಪ್ರತಿಪಾದಿಸುತ್ತದೆ. ತನ್ನ ಮತವೇ ಸರಿ, ಇತರರದ್ದು ಸರಿಯಿಲ್ಲ ಎಂದು ಪ್ರತಿಪಾದಿಸುವವರು ಕುರುಡನು ಆನೆಯ ಕೆಲವು ಅಂಗಾಂಗಗಳನ್ನು ಮುಟ್ಟಿ ಇದಿಷ್ಟೇ ಆನೆ ಎಂದು ತೀರ್ಮಾನಿಸಿ ವಾದಿಸುವ ಅಪೂರ್ಣ ಜ್ಞಾನಿಗಳು” ಎಂದು ವಿವರಣೆ ನೀಡುತ್ತಾರೆ.
ಬಹುಶಃ ಜಾತಿ, ಮತ, ಧರ್ಮದ ಹೆಸರಿನಲ್ಲಿ ಕಚ್ಚಾಡುವವರು ಕಣ್ತೆರೆದು ಈ ಪ್ರಪಂಚವನ್ನೊಮ್ಮೆ ವಿಶಾಲ ದೃಷ್ಠಿಯಿಂದ ನೋಡಲು ಗುರುವರ್ಯರ ಮಾತುಗಳು ಬೆಳಕು ನೀಡುತ್ತದೆ.
ಧರ್ಮ ಎನ್ನುವುದು ವ್ಯಕ್ತಿಯ ವೈಯಕ್ತಿಕ ನಂಬಿಕೆ. ಇತರರು ನಂಬಿದುದನ್ನು ಗೌರವಿಸುವ ವಿಶಾಲ ದೃಷ್ಠಿಯನ್ನು ನಾವು ಬೆಳೆಸಿಕೊಳ್ಳಬೇಕು. ಎಲ್ಲಾ ಮತಗಳ ಗುರಿ ಸತ್ಯದ ಸಾಕ್ಷಾತ್ಕರವೇ ಆಗಿದೆ ಎನ್ನುವುದನ್ನು ಮರೆಯಬಾರದು ಎನ್ನುತ್ತಾರೆ ನಾರಾಯಣ ಗುರುಗಳು.
ನಾರಾಯಣ ಗುರುಗಳ ಜಯಂತಿಯ ಈ ಶುಭಸಂದರ್ಭದಲ್ಲಿ ಅವರ ವಿಶ್ವಭಾತ್ರತ್ವದ ಸಂದೇಶವನ್ನು ಪಾಲಿಸೋಣ…ಪಸರಿಸೋಣ.

ಗೋಪಾಲ ಅಂಚನ್, ಆಲದಪದವು
……………


…..