ಆಲದಪದವಿನ ಪ್ರತಿಭೆ,ನಿಡುಬೆ ಶಾಲಾ ಶಿಕ್ಷಕಿ ಪ್ರಮೀಳಾ ರಾಜ್ ಗೆ ಫಿನಾಲೆ ಚಾಂಪಿಯನ್,ಗಾನಕೋಗಿಲೆ ಪ್ರಶಸ್ತಿ

ಬಂಟ್ವಾಳ: ಶೃಂಗೇರಿಯ ರಾಧಾಕೃಷ್ಣ ಜೋಯಿಸ ಸಾರಥ್ಯದ ಗುರುಸಾಹಿತ್ಯ ಬಳಗ ಶೃಂಗೇರಿ ವಾಹಿನಿಯು ಆಯೋಜಿಸಿದ್ದ “ಸಕಲ ಕಲಾವಲ್ಲಭ ಸಾಹಿತಿಗಳ ಸ್ಪರ್ಧೆ”ಯಲ್ಲಿ ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದ ನಿಡುಬೆ ಶಾಲಾ ಶಿಕ್ಷಕಿ ಪ್ರಮೀಳಾ ರಾಜ್ ಅವರು ಫಿನಾಲೆ ಚಾಂಪಿಯನ್ ಆಗಿ ಆಯ್ಕೆಯಾಗಿದ್ದು ಶೃಂಗೇರಿಯ ಗಾನಕೋಗಿಲೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮೂಲತಃ ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಆಲದಪದವು ನಿವಾಸಿಗಳಾದ ದಿ.ಶೀನ ಮತ್ತು ಲಲಿತಮ್ಮ ದಂಪತಿಗಳ ಪುತ್ರಿಯಾದ ಪ್ರಮೀಳಾರಾಜ್ ಕವಯಿತ್ರಿಯಾಗಿ, ಗಾಯಕಿಯಾಗಿ, ಸಾಹಿತಿಯಾಗಿ, ಬಹುಮುಖಿ ಸಾಧಕರಾಗಿ ಪರಿಚಿತರು.
ಸುಮಾರು 84 ದಿನಗಳ ಕಾಲ ನಡೆದ ಸ್ಪರ್ಧೆಯು ಭಕ್ತಿಗೀತೆ,ಭಾವಗೀತೆ, ಚಲನಚಿತ್ರ ಗೀತೆ,ಭಜನೆ,ರಂಗೋಲಿ, ಭಾರತೀಯ ಉಡುಗೆ-ತೊಡುಗೆ, ರಸಪ್ರಶ್ನೆಯಂತಹ ಅನೇಕ ಕಾರ್ಯಕ್ರಮಗಳನ್ನು ಒಳಗೊಂಡಿತ್ತು. ಪ್ರಶಸ್ತಿಗೆ ಭಾಜನರಾದ ಪ್ರಮೀಳಾರಾಜ್ ಅವರಿಗೆ
ಶಿಕ್ಷಣ ಇಲಾಖೆಯ ಅಧಿಕಾರಿಗಳು,ಎಸ್.ಡಿ.ಎಂ.ಸಿಯ ಅಧ್ಯಕ್ಷರು,ಉಪಾಧ್ಯಕ್ಷರು, ಮತ್ತು ಶಾಲಾ ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.

ಪ್ರಮೀಳಾ ರಾಜ್,ಸುಳ್ಯ:
ಪ್ರಮೀಳಾರಾಜ್ ಅವರು ಬಾಲ್ಯದಲ್ಲೇ ಸಂಗೀತ, ಸಾಹಿತ್ಯದ ಕಡೆ ಒಲವು ಬೆಳೆಸಿಕೊಂಡು ಗ್ರಾಮೀಣ ಪ್ರದೇಶದ ಪ್ರತಿಭೆಯಾಗಿ ರೂಪುಗೊಂಡವರು. ಬಂಟ್ವಾಳ ತಾಲೂಕಿನ ಮೂಡುಪಡುಕೋಡಿ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ವಾಮದಪದವು ಪದವಿಪೂರ್ವ ಕಾಲೇಜಿನಲ್ಲಿ ಹೈಸ್ಕೂಲ್ ಮತ್ತು ಪದವಿಪೂರ್ವ ಶಿಕ್ಷಣ ಹಾಗೂ
ಮಂಗಳೂರು ಸೈಂಟ್ ಆನ್ಸ್ ಶಿಕ್ಷಕಿಯರ ತರಬೇತಿ ಸಂಸ್ಥೆಯಲ್ಲಿ ವೃತ್ತಿ ಶಿಕ್ಷಣ ಪೂರೈಸಿ ಶಿಕ್ಷಕಿಯಾಗಿ ವೃತ್ತಿ ಬದುಕನ್ನು ಆರಂಭಿಸಿದವರು. ವಿದ್ಯಾರ್ಥಿ ಜೀವನದಲ್ಲೇ ಹಲವಾರು ಸಮಾರಂಭಗಳಲ್ಲಿ ತನ್ನ ಪ್ರತಿಭಾ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದ ಇವರು ಹಲವು ಕವಿಗಳ ಸಾಹಿತ್ಯಕ್ಕೆ ಸ್ವತಃ ರಾಗ ಸಂಯೋಜಿಸಿ,ಧ್ವನಿಯಾಗಿ ಜಿಲ್ಲಾಮಟ್ಟದಲ್ಲಿ ಪ್ರಶಸ್ತಿ ಪಡೆದುಕೊಂಡವರು.
ಇವರ ಮೊದಲ ರಚನೆಯಾದ ಸಂಗೀತಾ,ನನ್ನೆದೆಯ ಭಾವಗಳ ಯಾನ ಎಂಬ ಕೃತಿಗೆ ರಾಷ್ಟ್ರ ಮಟ್ಟದ ಸಾಹಿತ್ಯ ವಿಭೂಷಣ ಪ್ರಶಸ್ತಿ ಲಭಿಸಿದ್ದು ಸ್ನೇಹಸಂಗಮ ಸಾಹಿತ್ಯ ಬಳಗದಿಂದ ಸಾಹಿತ್ಯ ಸ್ಫೂರ್ತಿ ರತ್ನ ಪ್ರಶಸ್ತಿಗೂ ಪಾತ್ರರಾದವರು.
ಹಲವು ಸಾಹಿತ್ಯ ಬಳಗಗಳಲ್ಲಿ ಕ್ರಿಯಾಶೀಲ ಸಾಹಿತಿಯಾಗಿ ಭಾವಯಾನ ಎಂಬ ಹೆಸರಿನಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಛಾಪು ಮೂಡಿಸುತ್ತಿರುವ ಪ್ರಮೀಳಾರಾಜ್
ಪ್ರಸ್ತುತ ಸುಳ್ಯ ತಾಲೂಕಿನಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತಿದ್ದು ಸೃಜನಶೀಲ ಚಟುವಟಿಕೆಗಳಲ್ಲಿ ಸಕ್ರೀಯರಾಗಿದ್ದಾರೆ‌.
……….
ಲೇಖನ: ಗೋಪಾಲ ಅಂಚನ್
ಸಂಪಾದಕರು, ಯುವಧ್ವನಿ.ಕಾಂ