ಮಾವಿನಕಟ್ಟೆ ಲಾಕ್ ಡೌನ್ ಸದ್ವಿನಿಯೋಗ-ಶಾಲೆಗೆ ಹೊಸಕಳೆ ತಂದ ಹಳೇ ವಿದ್ಯಾರ್ಥಿಗಳು

ಕೊರೊನಾ ಭೀತಿಯಿಂದ ಅಲ್ಲಿಲ್ಲಿ ಅಲೆದಾಡದೆ ಮನೆಯಲ್ಲೇ ಕೂರಬೇಕಾದ ಪರಿಸ್ಥಿತಿಯನ್ನು ನಮ್ಮ ಯುವಕರು ಮತ್ತು ವಿದ್ಯಾರ್ಥಿಗಳು ಯಾವ ರೀತಿಯಲ್ಲಿ ಉಪಯೋಗಿಸಿಕೊಂಡಿದ್ದರೋ ಗೊತ್ತಿಲ್ಲ.
ಆದರೆ ಬಂಟ್ವಾಳ ತಾಲೂಕಿನ ಮಾವಿನಕಟ್ಟೆಯಲ್ಲಿ ಯುವಜನತೆ ಮತ್ತು ವಿದ್ಯಾರ್ಥಿಗಳನ್ನೊಳಗೊಂಡ ತಂಡವೊಂದು ತಾವು ಕಲಿತ ಪ್ರಾಥಮಿಕ ಶಾಲೆಗೆ ಚಿತ್ರ ಚಿತ್ತಾರದೊಂದಿಗೆ ಹೊಸರೂಪ ನೀಡುವ ಮೂಲಕ ಸಾರ್ವಜನಿಕ ವಲಯದ ಮುಕ್ತ ಪ್ರಶಂಸೆಗೆ ಪಾತ್ರವಾಗಿದೆ.
ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ಸದಸ್ಯರಿದ್ದ ಈ ತಂಡ ತಮ್ಮೂರಿನ ಶಾಲೆಯ ಹೊರ ಮತ್ತು ಒಳಗೋಡೆಗಳನ್ನು ವರ್ಲಿ ಕಲೆಯ ಮೂಲಕ ಆಕರ್ಷನೀಯಗೊಳಿಸಿ ಲಾಕ್ ಡೌನ್ ಸಮಯವನ್ನು ಸದ್ವಿನಿಯೋಗಪಡಿಸಿಕೊಂಡಿದೆ
.


ವೃತ್ತಿ ಬದುಕಿನಲ್ಲಿ ಸಿವಿಲ್ ಇಂಜಿನಿಯರ್ ಆಯ್ಕೆ ಮಾಡಿಕೊಂಡಿರುವ, ಚಿತ್ರಕಲಾವಿದ, ಉತ್ಸಾಹಿ ಯುವಕ ಅವಿನಾಶ್ ಬದ್ಯಾರ್ ನೇತೃತ್ವದಲ್ಲಿ ಜತೆಯಾದ ತಂಡದಿಂದ ಕೊರೊನಾ ಲಾಕ್ ಡೌನ್ ವಿರಾಮದ ವೇಳೆಯಲ್ಲಿ ರೂಪುಗೊಂಡ ಕ್ರಿಯಾತ್ಮಕ ಚಿಂತನೆಯ ಫಲವೇ ತಾವು ಹಿಂದೆ ಕಲಿತ ಪ್ರಾಥಮಿಕ ಶಾಲೆಗೆ ಕಲೆಯ ಸೊಬಗಿನೊಂದಿಗೆ ಸುಂದರ ರೂಪ ನೀಡುವ ಸುಮಧುರ ಯೋಜನೆ.
ಈ ಯೋಜನೆಗೆ ನೆಲೆಯಾಗಿದ್ದು ದ.ಕ.ಜಿ.ಪ.ಹಿರಿಯ ಪ್ರಾಥಮಿಕ ಶಾಲೆ ಶಿವನಗರ- ಮಾವಿನಕಟ್ಟೆ.
ಯುವಕರ ತಂಡ ಒಂದು ತಿಂಗಳ ಯೋಜನೆಯನ್ನು ಸಿದ್ಧಪಡಿಸಿತು, ಚಿತ್ರಕಲೆಯಲ್ಲಿ ಪಳಗಿದವರು…..ಹೊಸ ಕಲಾವಿದರು….ಆಸಕ್ತ ವಿದ್ಯಾರ್ಥಿಗಳು ಜತೆಯಾದರು, ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ಮಂದಿ ಅವಿನಾಶರ ಕಲ್ಪನೆಯ ಕನಸಿಗೆ ಸಾಥ್ ನೀಡಿದರು, ಶಾಲೆಯೆಡೆ ಹೆಜ್ಜೆ ಇಟ್ಟರು,


ಕುಂಚ ಹಿಡಿದು ತಾವು ಕಲಿತ ಶಾಲೆಯ ಗೋಡೆಯ ಮೇಲೆ ಹಳೆಯ ನೆನಪುಗಳೊಂದಿಗೆ ಹೊಸ ರೂಪಗಳನ್ನು ಚಿತ್ರಿಸಿದರು.
ಸೃಜನಶೀಲ ಮನಸ್ಸುಗಳಿಗೆ ತಿಂಗಳು ಕಳೆದದ್ದೇ ಗೊತ್ತಾಗಲಿಲ್ಲ, ಶಾಲೆ ಹೊಸಬಣ್ಣದ ಸೊಗಡಿನೊಂದಿಗೆ ಹೊಸರೂಪ ಪಡೆಯಿತು.
ಯುವಕರ ಒಂದು ತಿಂಗಳ ಉತ್ಸಾಹ, ಉಲ್ಲಾಸದ ಪ್ರಯೋಗಶೀಲತೆಗೆ ಮೈಯೊಡ್ಡಿಯೊಂಡ ಶಿವನಗರ ಶಾಲೆ ವರ್ಲಿ‌ ಕಲೆಯ ಚಿತ್ರ ಚಿತ್ತಾರದೊಂದಿಗೆ ಅಂದಚೆಂದವಾಗಿ‌ ಕಂಗೊಳಿಸಿತು. ಹಳೆಯ ನೆನಪುಗಳನ್ನು ಹೊತ್ತ ಕಂಬಗಳು, ಗೋಡೆಗಳು ಈಗ ಇನ್ನಷ್ಟು ಹೊಸ ಕಥೆಗಳನ್ನು ಹೊತ್ತು ಸಂಭ್ರಮದಿಂದ ಮೆರೆಯುತ್ತಿದೆ. ಕಳೆದ ಒಂದು ತಿಂಗಳಲ್ಲಿ ಶಾಲೆಯು ತನ್ನ ಹಳೆ ನೆನಪುಗಳನ್ನು ಮೆಲುಕು ಹಾಕಿ ಹಳೆ ವಿದ್ಯಾರ್ಥಿಗಳೊಂದಿಗೆ ಸಂಭ್ರಮಿಸಿದೆ.


ತಂಡದ ಮಾರ್ಗದರ್ಶಕರ, ಸದಸ್ಯರ ಆಸಕ್ತಿ, ಪ್ರತಿಭೆ, ಕೌಶಲ್ಯ ನಿಜಕ್ಕೂ ಮೆಚ್ಚುವಂತದ್ದು. ಶಾಲಾ ಹೊರಾಂಗಣದಲ್ಲಿ ವರ್ಲಿ‌ ಕಲೆಯಲ್ಲಿ ಮೂಡಿಬಂದ ತುಳುನಾಡಿನ ಸಂಸ್ಕ್ರತಿ, ಆಚರಣೆ, ಆರಾಧನೆ, ಜನಪದ ಸೊಗಡಿನ ಆಕೃತಿಗಳು ಹಾಗೂ ಹಾಲ್ ನಲ್ಲಿ ಮೈದಳೆದ ಭಾರತಮಾತೆ ಮತ್ತು ಶ್ರೀ ಶಾರದಾಂಬೆಯ ಕಲಾಕೃತಿಗಳು ಅದ್ಭುತ, ಅವರ್ಣನೀಯವಾಗಿದೆ, ನೋಡುಗರನ್ನು ಕೈಬೀಸಿ ಶಾಲೆಯೆಡೆಗೆ ಕರೆಯುವಂತಿದೆ. ಸರಕಾರಿ ಶಾಲೆಯ ಉಳಿವು- ಬೆಳವಣಿಗೆಯಲ್ಲಿಯೂ ಈ ಪ್ರಯತ್ನವು ಶ್ಲಾಘನೀಯವೆನಿಸಿದೆ. ಹಿರಿ- ಕಿರಿಯ ಪ್ರತಿಭೆಗಳ ಈ ವಿನೂತನ ಸಾಹಸಕ್ಕೆ ಶಾಲಾ ಶಿಕ್ಷಕವೃಂದ, ಪೋಷಕವೃಂದ ಹಾಗೂ ಸಮುದಾಯದ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.


…………….

ಅವಿನಾಶ್ ಬದ್ಯಾರ್ ನೇತೃತ್ವದ ತಂಡ


“ಸರಕಾರಿ ಶಾಲೆಗಳ ಆಗು-ಹೋಗುಗಳ ಜವಾಬ್ದಾರಿ ಆ ಊರಿನ ಜನರದ್ದು, ಹಳೆ ವಿದ್ಯಾರ್ಥಿಗಳದ್ದು. ಆ ಕಾಳಜಿಯೊಂದಿಗೆ ನಾವು ಲಾಕ್ ಡೌನ್ ಸಮಯದಲ್ಲಿ ಎತ್ತಿಕೊಂಡ ಈ ಯೋಜನೆ ಇಂದಿಗೆ ಮುಕ್ತಾಯವಂತೂ ಅಲ್ಲ, ಹೊಸ ಅಧ್ಯಾಯದ ಆರಂಭ.
ನಮ್ಮತನವನ್ನು ಉಳಿಸಿಕೊಂಡು ಅದನ್ನು ಮುಂದಿನ ತಲೆಮಾರಿಗೆ ತಲುಪಿಸಬೇಕು, ಶಾಲೆಯಲ್ಲಿ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆ ಆಗಬೇಕಾದರೆ ಅದಕ್ಕೆ ಬೇಕಾದ ಪೂರಕ ವಾತಾವರಣವಿರಬೇಕು ಎನ್ನುವ ಆಶಯವೂ ಈ ಯೋಜನೆಯ ಹಿಂದಿದೆ.
ಕಳೆದ ಒಂದು ತಿಂಗಳಲ್ಲಿ ನಾವು ಶಾಲೆಯಲ್ಲಿ ಸೃಷ್ಠಿಸಿದ ಹೊಸ ವಾತಾವರಣ, ತುಂಬಿಸಿದ ಶಕ್ತಿ ಅಲ್ಲಿ ಬೆಳೆಯುವ ಎಳೆಯ ಮನಸುಗಳಲ್ಲಿ ಸ್ವಲ್ಪ ಮಟ್ಟಿಗಾದರೂ ಪರಿಣಾಮ ಬೀರಿದಲ್ಲಿ ನಾನು ಕಂಡ ಕನಸು, ಪಟ್ಟ ಪರಿಶ್ರಮ ಸಾರ್ಥಕ”-ಅವಿನಾಶ್ ಬದ್ಯಾರ್.

………..

“ನಮ್ಮ ಶಾಲಾ ಹಳೆ ವಿದ್ಯಾರ್ಥಿಯಾದ ಅವಿನಾಶ್ ಆಚಾರ್ಯರ ನೇತೃತ್ವದಲ್ಲಿ ನಡೆದ ಶಾಲಾ ಸೌಂದರೀಕರಣವು ವರ್ಲಿ ಕಲಾಕೃತಿ ಹಾಗೂ ಚಿತ್ರ ಕಲೆಗಳಿಂದ ಅತ್ಯುತ್ತಮವಾಗಿ ಮೂಡಿ ಬಂದಿದೆ. ಅಳಿವಿನಂಚಿನಲ್ಲಿರುವ ಸರ್ಕಾರಿ ಶಾಲೆಗಳನ್ನು ಉಳಿಸುವಲ್ಲಿ ಹೊಸ ಹೆಜ್ಜೆಯಾಗಿ ಶ್ಲಾಘನೀಯ ಕೆಲಸವನ್ನು ನಿರ್ವಹಿಸಿದ ನಮ್ಮ ಶಾಲಾ ಎಲ್ಲಾ ಹಳೆಯ ವಿದ್ಯಾರ್ಥಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು. ಮುಂದೆಯೂ ಇವರ ಸಹಕಾರದೊಂದಿಗೆ ಶಾಲೆಯು ಅಭಿವೃದ್ಧಿಯತ್ತ ಸಾಗಲಿ ಎಂದು ಶಾಲೆಯ ಪರವಾಗಿ ಶುಭ ಹಾರೈಸುತ್ತೇನೆ.”- ಶ್ರೀಮತಿ ಲಕ್ಷ್ಮೀ ಶೆಟ್ಟಿ, ಶಾಲಾ ಶಿಕ್ಷಕಿ
………….

ಲೇಖನ: ಗೋಪಾಲ ಅಂಚನ್