ಹೆದ್ಧಾರಿಗಳ ಅವ್ಯವಸ್ಥೆಯ ಕೇಳುವವರ್ಯಾರು…?

ಕರ್ನಾಟಕ ರಾಜ್ಯದಲ್ಲಿ ಅತೀ ಹೆಚ್ಚು ಮಳೆ ಬೀಳುವ ಪ್ರದೇಶವಿದ್ದರೆ ಅದು ಕರಾವಳಿ ಭಾಗ. ಇತ್ತೀಚೆಗೆ ಕೆಲವು ವರ್ಷಗಳಿಂದ ಇಲ್ಲಿಯು ಮಳೆಯ ಪ್ರಮಾಣ ಕಡಿಮೆ ಆಗಿದೆ. ಆದರೂ ಬೇರೆ ಕಡೆಗೆ ಹೋಲಿಸಿದರೆ ಇಲ್ಲಿಯೇ ಜಾಸ್ತಿ. ಮಳೆಗಾಲ ಸುರುವಾದರೆ ಕರಾವಳಿ ಭಾಗದ ಎಲುಬು ತಜ್ಞ ಡಾಕ್ಟರ್ ಮತ್ತು ಗಾಡಿ ಗ್ಯಾರೆಜ್ ಗಳ ಆರ್ಥಿಕತೆಯ ಪರ್ವಕಾಲ. ಏಕೆಂದರೆ ಮಳೆ ಬಂತೆಂದೆರೆ ಇಲ್ಲಿಯ ರಸ್ತೆಯನ್ನು ಗುಂಡಿಗಳಲ್ಲಿ ಹುಡುಕಬೇಕಾಗಿದೆ. ಈ ಗುಂಡಿಗಳಿಗೆ ಗಾಡಿಗಳು ಬಿದ್ದು ಮುರಿದುಕೊಳ್ಳುತ್ತಾ ಅದರೊಟ್ಟಿಗೆ ಗಾಡಿಯಲ್ಲಿ ಕೂತವರ ಬೆನ್ನು ಮೂಳೆಯು ಮುರಿಯುತ್ತದೆ. ದ್ವಿಚಕ್ರವಾಹನ ಚಾಲಕರ ಪರಿಸ್ಥಿತಿಯಂತೂ ಶೋಚನೀಯ. ಶೇಕಡಾ ೮೦% ರಷ್ಟು ಜನಗಳು ಈ ಗುಂಡಿಗಳಿಗೆ ಬಿದ್ದು ಗಂಟು ಮೊಣಕಾಲು ಮುರಿತಕ್ಕೆ ಒಳಗಾಗಿರಬಹುದೇನೋ? ಆದರೇ ಏನು ‌ಮಾಡಲೀ?.ಯಾರಲ್ಲಿ ಹೇಳಲಿ?. ಯಾರನ್ನು ದೂರಲಿ..?.
ನಮ್ಮ ವ್ಯವಸ್ಥೆಯೇ ಹಾಗೆ. ಮಳೆಗಾಲ ಪ್ರಾರಂಭವಾಗುತ್ತದೆ ಎನ್ನುವಷ್ಟರಲ್ಲಿ ಯಾವುದಾದರು ಕಂಪೆನಿಯವರು ಪೈಪೊ,ಕೇಬಳೊ ಅಳವಡಿಸಲು ರಸ್ತೆಯ ಇಕ್ಕೆಲಗಳಲ್ಲಿ ಗುಂಡಿಯೋ ಚರಂಡಿಯೋ ಮಾಡಿ ಅವನ ಕೆಲಸ ಆದ ನಂತರ ಅರ್ಧಂಬರ್ಧ ಮುಚ್ಚಿಯೋ ಮುಚ್ಚದೆಯೋ ಹೋಗುತ್ತಾರೆ. ಇಂತಹ ಜಾಗದಲ್ಲಿ ಮಳೆಯ ನೀರು ತುಂಬಿ ರಸ್ತೆಗೆ ಸಮಾನವಾಗಿ ಕಾಣುತ್ತದೆ. ಪಾಪ ಪುಣ್ಯಾತ್ಮರು ಸೈಡುಕೊಡುವ ನೆಪದಲ್ಲೋ ಅಥವಾ ಒವರ್ಟೆಕ್ ಮಾಡುವ ಅವಸರದಲ್ಲಿ ಈ ಗುಂಡಿಗಳಿಗೆ ಬಿದ್ದು ಗಾಡಿಗೂ, ತನ್ನ ಜೀವಕ್ಕೂ ಹಾನಿ. ಆದರೇನು ಮಾಡುವುದು ಈ ಅವಘಡ ಸಂಭವಿಸಿದ ಜಾಗದಲ್ಲಿ ಈ ವ್ಯವಸ್ಥೆಗಳ ಬಗ್ಗೆ ಸ್ವಲ್ಪ ಹೊತ್ತು ನಿಂತು ಮಾತನಾಡಿಕೊಳ್ಳುತ್ತೇವೆ, ಅಷ್ಟೇ ಬೇಗ ಇಂತಹಾ ವಿಷಯವನ್ನು ಮರೆಯುತ್ತೇವೆ. ಈ ರಸ್ತೆಗಳ ಅವ್ಯವಸ್ಥೆಗೆ ಇದು ಒಂದು ಕಾರಣ. ಇನ್ನೊಂದು ಪ್ರಾಮುಖ್ಯ ವಿಷಯವೆಂದರೆ ಮಳೆಗಾಲ ಮುಗಿದ ತಕ್ಷಣ ಈ ಹೊಂಡಗಳನ್ನು ಮುಚ್ಚಿ ರಸ್ತೆಯನ್ನು ಯಥಾ ಸ್ಥಿತಿಗೆ ತಂದರೂ ಮಳೆ ನೀರು ಹರಿಯಲು ಚರಂಡಿಗಳು ಇಲ್ಲದಿರುವುದರಿಂದ ರಸ್ತೆಗಳು ಹೊಂಡಗಳಾಗಿ ರೂಪಾಂತರಗೊಳ್ಳುತ್ತದೆ. ಮಳೆನೀರು ಹರಿಯಲು ರಸ್ತೆಯ ಇಕ್ಕೆಲಗಳಲ್ಲಿ ಚರಂಡಿಗಳನ್ನು ನಿರ್ಮಿಸಿದರೆ ಇಂತಹಾ ಪದೇ ಪದೇ ಡಾಮರೀಕರಣ ಮಾಡಿ ಸರ್ಕಾರಕ್ಕೆ ಇಲ್ಲದ ಹೊರೆ ಹೊರಿಸುವುದು ತಪ್ಪುತ್ತದೆ. ಬಹುಶಃ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಇದರಿಂದ ಏನೋ ಅನುಕೂಲ ಇದೆಯೋ ಎಂಬ ಸಂಶಯ ಕಾಡುತ್ತದೆ. ಚರಂಡಿಗಳನ್ನು ಮೊದಲು ನಿರ್ಮಿಸಿ ಆ ನಂತರ ರಸ್ತೆಯ ಕಾಮಗಾರಿ ಮಾಡಿದರೆ ಒಳಿತು ಎನ್ನುವ ಜನ ಸಾಮಾನ್ಯರಿಗೂ ತಿಳಿದಿರುವ ಸಾಮಾನ್ಯ ಜ್ಞಾನ ಈ ಅಧಿಕಾರಿಗಳಿಗೆ ಯಾಕಿಲ್ಲ?


ಕೆಲವು ಕಡೆ ಚರಂಡಿಗಳು ಇದ್ದರೂ ಅದರ ಕೆಸರು, ಮಣ್ಣು ತೆಗೆದು ಸುಲಭವಾಗಿ ನೀರು ಹರಿಯುವ ವ್ಯವಸ್ಥೆಯನ್ನು ಯಾಕೆ ಮಾಡಿಸುತಿಲ್ಲ?. ಸಾಧಾರಣ 20ವರ್ಷಗಳ ಹಿಂದೆ ನಾವು ಸ್ಕೂಲ್ ಗೆ ಹೋಗುವಾಗ ಈ ರಸ್ತೆಗಳನ್ನು ನೋಡಿಕೊಳ್ಳಲು “ಗ್ಯಾಂಗ್” ನವರು ಎಂದು ಕರೆಸಿಕೊಳ್ಳುವವರು ಕೆಲಸಕ್ಕಿದ್ದರು. ಇವರು ಖಾಕಿ ಚಡ್ಡಿ, ಖಾಕಿ ಅಂಗಿ ಸಮವಸ್ತ್ರ ದೊಂದಿಗೆ ಬಟ್ಟಿ, ಹಾರೆ, ಗುದ್ದಲಿಯನ್ನು ಹೊತ್ತುಕೊಂಡು ಹಲವು ಕಿ. ಮೀಟರ್ ದೂರ ಕಾಲ್ನಡಿಗೆಯಲ್ಲೇ ನಡೆಯುತ್ತಾ ರಸ್ತೆಯಲ್ಲಿ ಒಂದು ಚಿಕ್ಕ ಗುಂಡಿ ಬಿದ್ದರೂ ಅದಕ್ಕೆ ತೇಪೆ ಹಚ್ಚುತಿದ್ದರು. ಈ ತೇಪೆ ಹಾಕುವ ಡಾಮರುಗಳನ್ನು ರಸ್ತೆಬಿಟ್ಟು ಸ್ವಲ್ಪ ದೂರ ಒಂದು ಆಯತಾಕಾರದ ಗುಂಡಿ ಮಾಡಿ ಅದರಲ್ಲಿ ತುಂಬಿಸಿ ಸೇರಿಸಿಡುತಿದ್ದರು. ಈ ಡಾಮರುಗಳು ಬಿಸಿಲಿಗೆ ಮೃದುವಾಗುತಿತ್ತು. ನಾವು ಮಕ್ಕಳಿರುವಾಗ ಈ ಡಾಮಾರಿಗೆ ಕೈ ಹಾಕಿ ತೆಗೆದು ಉಂಡೆಗಳಾಗಿ ಮಾಡಿ ಆಟವಾಡುತ್ತಾ ಕೈ ಚೀಲ ಬಟ್ಟೆಗಳಿಗೆ ಅಂಟಿಸಿಕೊಳ್ಳುತ್ತ ತೆಗೆಯಲು ಬಾರದೆ ಪೇಚಾಟ ನಡೆಸಿದ್ದು, ಮನೆಯಲ್ಲಿ ಪೆಟ್ಟು ಬೈಗುಳ ತಿಂದಿದ್ದು, ಮರೆಯಲುಂಟೇ…? ಇದು ನಮ್ಮ ಬಾಲ್ಯದ ನೆನಪು. ಇದೆಲ್ಲಾ ಯಾಕೆ ಹೇಳುತ್ತಿದ್ದೇನೆಂದರೆ ಆ ಸಮಯದಲ್ಲಿ ಇಂತಹ ಕೆಲಸದವರಲ್ಲಿ ಅಷ್ಟು ನಿಯತ್ತು, ಬದ್ಧತೆ ಇರುತ್ತಿತ್ತು. ಇವರು ರಸ್ತೆಯಿಂದ ಹರಿಯುವ ನೀರನ್ನು ಚಿಕ್ಕ ಚಿಕ್ಕ ಕಣಿವೆಗಳನ್ನು ನಿರ್ಮಿಸುವ ಮೂಲಕ ದೊಡ್ಡ ಚರಂಡಿಗೆ ಸರಾಗವಾಗಿ ಹರಿಯುವಂತೆ ಮಾಡುತಿದ್ದರು. ಆದರೆ ಈಗ ಅಂತಹ ಕೆಲಸಗಾರರನ್ನು ಸರ್ಕಾರ ಯಾಕೆ ನೇಮಿಸುತಿಲ್ಲ?. ಆದ್ದರಿಂದ ಮಂತ್ರಿ ಮಹೋದಯರೇ? ಹೆದ್ಧಾರಿ ಇಲಾಖೆಗಳ ಅಧಿಕಾರಿಗಳೇ..? ನೀವು ಧ್ವಿಪತ , ಚತುಷ್ಪಥ ಅಥವಾ ಎಷ್ಟೆ ಪಥಗಳ ರಸ್ತೆಯನ್ನು ನಿರ್ಮಿಸುತ್ತಿರೋ, ದುರಸ್ತಿ ಪಡಿಸುತ್ತಿರೋ ಅದಕ್ಕೆ ಮುಂಚೆ ರಸ್ತೆಗಳ ಇಕ್ಕೆಲಗಳಲ್ಲಿ ಭವಿಷ್ಯದ ಚಿಂತನೆಯನ್ನಿಟ್ಟುಕೊಂಡು ಚರಂಡಿಗಳನ್ನು ನಿರ್ಮಿಸಿದರೆ ಒಳಿತು. ಜತೆಯಲ್ಲಿ ರಸ್ತೆಗಳ ಬಗ್ಗೆ ಗಮನಹರಿಸಲು ಕೆಲಸಗಾರರನ್ನು ನೇಮಿಸಿದರೆ ಅನುಕೂಲ. ಇಲ್ಲದಿದ್ದರೆ ನೀವು ಏನೂ ಮಾಡಿದರೂ ನೀರಲ್ಲಿ ಹೋಮ ಇಟ್ಟಹಾಗೆ.

✍️ನಾರಾಯಣ್ ಸಿ. ಪೆರ್ನೆ.