ಬನ್ನಿರಿ..ಆನಂದಿಸೋಣ..

ವಿಷಯ: ನೆಮ್ಮದಿ

ಸಂಚಿಕೆ-೧೭

…………………….
ಮೊನ್ನೆ ದೊಡ್ಡ ಗುಂಪೊಂದಕ್ಕೆ ನಾನು ನಡೆಸಿದ ” “ಬನ್ನಿರಿ…ಆನಂದಿಸೋಣ” ವಿಶೇಷ ಮಾತು- ಕತೆ ಕಾರ್ಯಕ್ರಮದಲ್ಲಿ ” ಯಾರೆಲ್ಲ ನೆಮ್ಮದಿಯಲ್ಲಿದ್ದೀರಿ” ಎಂದು ಕೇಳಿದಾಗ ಶೇಖಡಾ 90 ಜನ ನೆಮ್ಮದಿಯಿಲ್ಲವೆಂದೇ ತಲೆಯಾಡಿಸಿದರು. ಒಂದೊಮ್ಮೆ ” ನಾವು ನೆಮ್ಮದಿಯಿಂದ ಇದ್ದೇವೆ” ಎಂದು ಅಲ್ಲಿದ್ದ ಕೆಲವರು ಹೇಳಿದರಾದರೂ ಮತ್ತೆ ನಾನು ಕೆದಕಿದಾಗ ” ಇಲ್ಲ, ನಮಗೂ (ಆ) ಕಾರಣದಿಂದ ನೆಮ್ಮದಿಯಿಲ್ಲ ಸರ್” ಎಂದರು.
ನಿಜ..! ಬೇರೆ ಬೇರೆ ಕಾರಣದಿಂದ ನಾವು ನೆಮ್ಮದಿಯಿಂದ ಇಲ್ಲ, ಇಲ್ಲವೇ ನಮ್ಮ ನೆಮ್ಮದಿಯನ್ನು ಕಳಕೊಂಡಿದ್ದೇವೆ. ಹಾಗಾದರೆ ನಾವು ಖುಷಿಯಿಂದ, ನೆಮ್ಮದಿಯಿಂದ, ಸಂತೋಷದಿಂದ ಇರಲು ಏನು ಬೇಕು? ಎಂಬ ಪ್ರಶ್ನೆಯನ್ನು ನಾನೂ ಆಗಾಗ್ಗೆ ನನ್ನನ್ನೇ ಕೇಳಿಕೊಳ್ಳುತ್ತೇನೆ, ಜತೆಯಲ್ಲಿ ನಿಮ್ಮನ್ನೂ ಕೇಳುತ್ತೇನೆ.
ನೆಮ್ಮದಿಯಿಂದ ಇರಲು ಕೆಲವು ವಸ್ತುಗಳು, ಕೆಲವು ವ್ಯಕ್ತಿಗಳು, ಕೆಲವು ಸ್ಥಾನಮಾನಗಳು ಮುಖ್ಯ ಕಾರಣ ಎನ್ನುವುದು ಒಂದೆಡೆಯಾದರೆ ನೆಮ್ಮದಿ ಕಳೆದುಕೊಳ್ಳಲು ಇದೇ ವಸ್ತುಗಳು, ವ್ಯಕ್ತಿಗಳೂ ಇಲ್ಲವೇ ಸ್ಥಾನಮಾನಗಳೂ ಕಾರಣವಾಗುತ್ತಿದೆ ಎನ್ನುವ ವಾದವೂ ಮತ್ತೊಂದೆಡೆ.
ಹೌದು…ನಾವು ನೆಮ್ಮದಿಯಿಂದ ಜೀವನ ನಡೆಸಲು ಒಂದಷ್ಟು ಜಾಗ, ಮನೆ, ವಾಹನ, ನೀರು, ವಿದ್ಯುತ್, ಬೆಳಕು, ಪರಿಸರ, ಸಂಬಂಧಗಳು, ಮನೋರಂಜನೆ, ಟಿ.ವಿ., ಪ್ರಿಡ್ಜ್, ಮೊಬೈಲ್, ಕಂಪ್ಯೂಟರ್, ಬಟ್ಟೆಗಳು, ಆಹಾರ, ಆರೋಗ್ಯ, ಉದ್ಯೋಗ, ದುಡ್ಡು, ಆಸ್ತಿ, ಶಿಕ್ಷಣ…ಈ ರೀತಿ ಬೇಕು ಎನ್ನುವ ಪಟ್ಟಿ ಉದ್ದುದ್ದಾಗಿ ಮುಂದುವರಿಯುತ್ತದೆ…! ಒಂದು ಹಂತಕ್ಕೆ ನಮಗೆ ನಾವೇ ಮಾಡಿಕೊಂಡ ಈ ಪಟ್ಟಿಯೇ ಅಂತಿಮ, ಇವಿಷ್ಟು ದೊರೆತರೆ ನಾವು ನೆಮ್ಮದಿಯಿಂದ ಇರುತ್ತೇವೆ ಎಂದುಕೊಳ್ಳುತ್ತೇವೆ, ಆದರೆ ಇವಿಷ್ಟು ದೊರೆತಾಗ ” ಅಯ್ಯೋ ಅದೊಂದು ಇಲ್ಲವಲ್ಲ, ಅವರಲ್ಲಿ ಅದೂ ಇದೆ” ಎಂದು ಮನಸ್ಸಿನಲ್ಲಿ ಮತ್ತೊಂದು ಆಸೆ ಚಿಗುರಿದಾಗ ಮತ್ತೆ ನೆಮ್ಮದಿಯನ್ನು ಕಳೆದುಕೊಳ್ಳುತ್ರೇವೆ‌..!.
ಉದಾಹರಣೆಗೆ ಮೇಲಿನ ಪಟ್ಟಿಯಲ್ಲಿರುವ ಎಲ್ಲವನ್ನೂ ಪೂರೈಸಿಕೊಳ್ಳಲು ಶಕ್ತರಿರುವವರು ಪೂರೈಸಿಕೊಳ್ಳಬಹುದು, ಆದರೆ ಅಸಕ್ತರು? ಶಕ್ತಿ, ಸಾಮರ್ಥವಿಲ್ಲದವರು ಏನು ಮಾಡಬೇಕು? ಅವರಿಗೆ ಶಕ್ತಿ ಇಲ್ಲ ಎಂದ ಮಾತ್ರಕ್ಕೆ ಅವರಿಗೆ ಶಾಂತಿ, ನೆಮ್ಮದಿ ಬೇಡವೆಂದು ತೀರ್ಮಾನಿಸಬಹುದೇ? ಇಲ್ಲ, ಇಲ್ಲಿ ಶಕ್ತಿವಂತರು, ಶಕ್ತಿ ಇಲ್ಲದವರು ಎಂದು ವಿಂಗಡಿಸುವ ಮುನ್ನ ನಿಜಕ್ಕೂ ನೆಮ್ಮದಿ ಎಂದರೇನು ಎಂದು ನೆಮ್ಮದಿಯನ್ನು ಬೇರೊಂದು ಬಗೆಯಲ್ಲಿ ಕಾಣುವುದು, ನಾವೇ ನಮ್ಮೊಳಗೆ ಬೇರೊಂದು ಬಗೆಯಲ್ಲಿ ವಿಶ್ಲೇಷಿಸುವುದು ಮುಖ್ಯವಾಗುತ್ತದೆ. ಯಾಕೆಂದರೆ ನೆಮ್ಮದಿಯಿಂದ ಬದುಕುವುದು ಪ್ರತಿಯೊಬ್ಬನ ಹಕ್ಕು..!
ನಮಗೆ ನೆಮ್ಮದಿ ಕೊಡುತ್ತದೆ ಎಂದು ನಾವು ಭಾವಿಸಿರುವ ವಸ್ತುಗಳ, ವ್ಯಕ್ತಿಗಳ ( ಸಂಬಂಧಗಳು), ಸ್ಥಾನಮಾನಗಳ ಬಗ್ಗೆ ಒಂದಿಷ್ಟು ಗಮನಿಸೋಣ. ಉದಾಹರಣೆಗೆ ಟಿ.ವಿ, ಪ್ರಿಡ್ಜ್, ವಾಶಿಂಗ್ ಮಿಶಿನ್, ಮನೆಯಲ್ಲಿ ನಾಲ್ಕೈದು ವಾಹನಗಳು, ಕಂಪ್ಯೂಟರ್, ಎಕರೆಗಟ್ಟಲೆ ಜಾಗ, ನಾಲ್ಕೈದು ಮನೆಗಳು ಇದೆ …ಆದರೆ ಮನೆಯಲ್ಲಿ ಕನಿಷ್ಟ ಒಂದು ದಿನ ಕುಡಿಯಲು ನೀರಿಲ್ಲ, ಬೆಳಕಿಲ್ಲ, ಯಾರಿಗೂ ಆರೋಗ್ಯ ಸರಿ ಇಲ್ಲ, ತಿನ್ನಲು ಯಾವುದೇ ಆಹಾರ ವಸ್ತಿಲ್ಲ, ಪ್ರೀತಿ ತೋರುವವರಿಲ್ಲ, ಓದಲು ಪೇಪರ್ ಬಂದಿಲ್ಲ, ಟಿ.ವಿ.ನೋಡಲು ವಿದ್ಯುತ್ತಿಲ್ಲ, ಮೊಬೈಲ್ ಆಡಲು ನೆಟ್ ವರ್ಕಿಲ್ಲ ಎಂದಾಗ ನಮ್ಮ ಪರಿಸ್ಥಿತಿ ಏನಾಗುತ್ತದೆ? ನಿಜಕ್ಕೂ ಆ ಕ್ಷಣಕ್ಕೆ ನಮಗೆ ನೆಮ್ಮದಿ ಕೊಡುವ ವಸ್ತು ಅಥವಾ ಅಂಶಗಳು ಯಾವುದು? ಅದ್ಯಾವುದೇ ಆಸ್ತಿ ಅಂತಸ್ತು, ಟಿ.ವಿ., ಮೊಬೈಲ್ ಇಲ್ಲದಿದ್ದರೂ ಸರಿ, ಸದ್ಯಕ್ಕೆ ಕುಡಿಯಲು ಒಂದಿಷ್ಟು ನೀರು, ತಿನ್ನಲು ಒಂದಿಷ್ಟು ಆಹಾರ, ಮಲಗಲು ಒಂದು ಚಿಕ್ಕ ಚಾಪೆ, ಪ್ರೀತಿ ತೋರುವ ಒಂದಿಬ್ಬರು ಸಿಕ್ಕರೆ ಸಾಕು, ಒಮ್ಮೆ ಆರೋಗ್ಯ ಸುಧಾರಿಸಿದರೆ ಸಾಕು, ಅದೇ ದೊಡ್ಡ ನೆಮ್ಮದಿ ಎಂದೆಣಿಸುವುದಿಲ್ಲವೇ?. ನಿಜಕ್ಕೂ ಅಷ್ಟರಲ್ಲೇ ನೆಮ್ಮದಿಯ ರಹಸ್ಯ ಅಡಗಿದೆಯಲ್ಲವೇ?.
ವರ್ಷವಿಡೀ ಎಲ್ಲವನ್ನೂ ಉಪಯೋಗಿಸುತ್ತಾ ಅಥವಾ ಮತ್ತೆ ಮತ್ತೆ ಅದು ಬೇಕು, ಇದು ಬೇಕು ಎನ್ನುತ್ತಾ ವಸ್ತುವೈಭವಗಳಲ್ಲೇ ನೆಮ್ಮದಿಯನ್ನು ಕಾಣುವವರು ಒಂದು ದಿನ ತನ್ನ ಜೀವನದಲ್ಲಿ ಅದೇನೋ ಕಿಂಚಿತ್ತೂ ವ್ಯತ್ಯಾಸ ಉಂಟಾದಾಗ ತಮ್ಮ ಇಡೀ ನೆಮ್ಮದಿಯನ್ನು ಕಳೆದುಕೊಂಡು ಚಡಪಡಿಸುತ್ತಾರೆ ಎಂದಾದರೆ ಬದುಕಿನುದ್ದಕ್ಕೂ ಏನು ಇಲ್ಲದೆ ಇದೇ ಬದುಕು ಎಂದು ಬದುಕು ಸವೆಸುವ ಅದೆಷ್ಟೋ ಮಂದಿಯ ಸ್ಥಿತಿ ಹೇಗಿರಬಹುದು? ಒಮ್ಮೆ ಊಹಿಸೋಣ…!
ಹೌದು…! ಯಾಕೆಂದರೆ ಅತೀ ಹೆಚ್ಚು ವೈಭೋಗವಿರುವವರು ಕಡಿಮೆ ಮಂದಿ, ಅತೀ ಕಡಿಮೆ ಸೌಲಭ್ಯ( ಮೂಲಭೂತ ಅಗತ್ಯಗಳು ) ಇರುವವರೇ ಹೆಚ್ಚು ಜನರಿರುವುದು ಎನ್ನುವುದು ಇಂದಿಗೂ ಸತ್ಯ. ಈ ಬಹುಪಾಲು ಜನರು ನೆಮ್ಮದಿಯನ್ನು ಕಳೆದುಕೊಂಡರೆ?.
ನಿಜಕ್ಕೂ ನೆಮ್ಮದಿ ಇರುವುದು ಅಥವಾ ಕಳೆದುಕೊಳ್ಳುವುದು ವಸ್ತುಗಳಿಂದ/ ವ್ಯಕ್ತಿಗಳಿಂದ/ ಸ್ಥಾನಮಾನಗಳಿಂದ ಅಲ್ಲ. ಯಾಕೆಂದರೆ ಎಲ್ಲವೂ, ಎಲ್ಲರೂ ಇದ್ದರೂ ನೆಮ್ಮದಿಯಿಲ್ಲ. ಏನೂ ಇಲ್ಲದಿದ್ದರೂ/ ಯಾರೂ ಇಲ್ಲದಿದ್ದರೂ ನೆಮ್ಮದಿಯಿಲ್ಲ. ಎಲ್ಲವೂ ಇದೆ, ಉಪಯೋಗಿಸುವವರು ಯಾರಿಲ್ಲದಿದ್ದರೂ ನೆಮ್ಮದಿ ಇಲ್ಲ. ಎಲ್ಲರೂ ಇದ್ದಾರೆ, ಆದರೆ ಏನೂ ಇಲ್ಲ ಎಂಬ ಸ್ಥಿತಿ ಇದ್ದರೂ ನೆಮ್ಮದಿಯಿಲ್ಲ.
ಹಾಗಾದರೆ ನಿಜಕ್ಕೂ ನೆಮ್ಮದಿ ಎಲ್ಲಿದೆ ?. ಅದು ಹೊರಗಿಲ್ಲ, ನಮ್ಮೊಳಗೆ ಇದೆ. ಅಂದರೆ ವಸ್ತುಗಳು, ಸಂಬಂಧಗಳು, ಸ್ಥಾನಮಾನಗಳು ಬೇಡವೇ?. ಬೇಕು. ಮನುಷ್ಯ ಸಹಜವಾಗಿ ಬದುಕಲು ಬೇಕಾದ ಮೂಲಭೂತ ಅವಶ್ಯಕತೆಗಳು, ಸಂಬಂಧಗಳು, ಸ್ಥಾನಮಾನಗಳು ಬೇಕು. ಬೇಕು ಬೇಕು ಎನ್ನುವ ಬದಲು ಅದಿಲ್ಲದಿದ್ದರೂ ಬದುಕಬಹುದಾಗಿದೆ ಎನ್ನುತ್ತಾ ಇದ್ದದ್ದು ಸಾಕು ಸಾಕು ಎನ್ನುವಲ್ಲಿಗೆ ನಮ್ಮ ಬೇಕುಗಳ ಪಟ್ಟಿ ಕಿರಿದಾಗಬೇಕು.
ನಿಜಕ್ಕೂ ನೆಮ್ಮದಿಯಿರುವುದು ವಸ್ತುಗಳಲ್ಲಿ ಅಲ್ಲ, ಇದ್ದ ವಸ್ತುವನ್ನು ಚೆನ್ನಾಗಿ ಉಪಯೋಗಿಸುವುದರಲ್ಲಿ. ವಸ್ತು, ಸಂಪತ್ತನ್ನು ಮತ್ತಷ್ಟು ಕೂಡಿಡುವುದರಲ್ಲಿ ನೆಮ್ಮದಿಯಿರುವುದಲ್ಲ, ಹೆಚ್ಚಿರುವುದನ್ನು ಏನೂ ಇಲ್ಲದವರಿಗೆ ಒಂದಿಷ್ಟು ದಾನ ಮಾಡುವುದರಲ್ಲಿ.
ನೆಮ್ಮದಿ ಇರುವುದು ವಸ್ತುಗಳನ್ನು ಪ್ರೀತಿಸುವುದರಲ್ಲಿ ಅಲ್ಲ, ವ್ಯಕ್ತಿಗಳನ್ನು ಪ್ರೀತಿಸುವುದರಲ್ಲಿ, ದ್ವೇಷಿಸುವವರನ್ನು ಕೂಡ ಪ್ರೀತಿಸುವುದರಲ್ಲಿ. ನೆಮ್ಮದಿ ಇರುವುದು ಅಧಿಕಾರದಲ್ಲಿ ಅಲ್ಲ ಸೇವೆಯಲ್ಲಿ.
ಯಾವ ವಸ್ತು, ಯಾವ ವ್ಯಕ್ತಿ, ಯಾವ ಸ್ಥಾನಮಾನ ಎಷ್ಟಿದ್ದರೂ ಹಿಗ್ಗದೆ ಎಲ್ಲವನ್ನೂ, ಎಲ್ಲರನ್ನೂ ಕಳೆದುಕೊಂಡಾಗ ಶೋಕಿಸದೆ ಇದ್ದುದನ್ನು, ಇದ್ದವರನ್ನು ಅತೀ ಹೆಚ್ಚು ಪ್ರೀತಿಸುವುದರಲ್ಲೇ ನೆಮ್ಮದಿಯ ಸೂತ್ರ ಅಡಗಿದೆ. ವಸ್ತುಗಳು, ವ್ಯಕ್ತಿಗಳು, ಸ್ಥಾನಮಾನಗಳು ಬದಲಾಗಬೇಕಿಲ್ಲ, ಮನಸ್ಸು ಬದಲಾಗಬೇಕು, ನೆಮ್ಮದಿಯನ್ನು ಹುಡುಕುವ ದೃಷ್ಠಿ ಬದಲಾಗಬೇಕು. ಜ್ಞಾನದಿಂದ ನೆಮ್ಮದಿ, ಧ್ಯಾನದಿಂದ ಮತ್ತಷ್ಟು ನೆಮ್ಮದಿ, ತ್ಯಾಗದಿಂದ ಇನ್ನೂ ಹೆಚ್ಚು ನೆಮ್ಮದಿ…!
ಏನಂತೀರಿ….?
( ಮುಂದುವರಿಯುವುದು)

@ ಗೋಪಾಲ ಅಂಚನ್