ಅಪಪ್ರಚಾರ ನಿಲ್ಲಿಸಿ, ಅಭಿವೃದ್ಧಿ ಮಾಡಿ ತೋರಿಸಿ- ಬೇಬಿ ಕುಂದರ್ ಸವಾಲು

ಬಂಟ್ವಾಳ: ಕ್ಷೇತ್ರದಲ್ಲಿ ಶಾಸಕರಾಗಿ, ಸಚಿವರಾಗಿದ್ದ ಸಂದರ್ಭದಲ್ಲಿ ಬಿ.ರಮಾನಾಥ ರೈಯವರು ಮಾದರಿ ಅಭಿವೃದ್ಧಿ ಕಾರ್ಯ ನಡೆಸಿ ಕ್ಷೇತ್ರವನ್ನು ರಾಜ್ಯದಲ್ಲೇ ನಂ.1 ಆಗಿ ರೂಪಿಸಿದ್ದಾರೆ. ಆದರೆ ಕಳೆದ ಅವಧಿಯಲ್ಲಿ ಶಾಸಕರಾಗಿ ಆಯ್ಕೆಯಾದ ರಾಜೇಶ್ ನಾಯ್ಕ್ ಅವರು ಕ್ಷೇತ್ರದಲ್ಲಿ ಯಾವ ಅಭಿವೃದ್ಧಿ ಕಾರ್ಯ ನಡೆಸಿದ್ದಾರೆ? ಎಂದು ಪ್ರಶ್ನಿಸಿರುವ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ‌ ಕುಂದರ್, ರೈಯವರು ನಡೆಸಿರುವ ಅಭಿವೃದ್ಧಿ ಕಾರ್ಯಗಳನ್ನೇ ತಮ್ಮದೆಂದು ಬಿಂಬಿಸಿ ಪ್ರಚಾರ ನಡೆಸುತ್ತಿರುವ ಬಿಜೆಪಿಗರು ಅಪಪ್ರಚಾರಗಳನ್ನು ನಿಲ್ಲಿಸಿ, ತಾಕತ್ತಿದ್ದರೆ ರಮಾನಾಥ ರೈಯವರಂತೆ ಅಭಿವೃದ್ಧಿ ಮಾಡಿ ತೋರಿಸಲಿ ಎಂದು ಸವಾಲೆಸೆದಿದ್ದಾರೆ.


ಬಿ.ಸಿ.ರೋಡಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಂದರ್, ಈಗಿನ ಶಾಸಕರ ಅವಧಿಯಲ್ಲಿ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ, ಇದರಿಂದ ಕ್ಷೇತ್ರದ ಜನತೆಯಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ, ರಮಾನಾಥ ರೈ ಮಾಡಿರುವ ಮಾದರಿ ಅಭಿವೃದ್ಧಿ ಕಾರ್ಯಗಳನ್ನು ಕ್ಷೇತ್ರದ ಜನತೆ ಈಗಲೂ ನೆನೆಯುತ್ತಿದ್ದಾರೆ, ಅವರಿಗೆ ಇದಕ್ಕಿಂತ ದೊಡ್ಡದಾದ ಸರ್ಟಿಪಿಕೇಟ್ ಬೇಕಾಗಿಲ್ಲ ಎಂದರು.
ಬಿಜೆಪಿಯ ವಕ್ತಾರರೆಂದು ಹೇಳಿಕೊಳ್ಳುವ ನಾಯಕರು ರೈಯವರ ಬಗ್ಗೆ ವೈಯಕ್ತಿಕ ನಿಂದನೆ ಮಾಡುವುದು ಶೋಭೆಯಲ್ಲ, ತಮ್ಮ ಅಸ್ಥಿತ್ವವನ್ನು ಉಳಿಸಿಕೊಳ್ಳಲು ಅವರು ಶಾಸಕರನ್ನು ದಾರಿ ತಪ್ಪಿಸುತ್ತಿದ್ದಾರೆ, ಜನರಿಗಾಗಿ ಏನೂ ಮಾಡದ ಅವರಿಗೆ ರೈಯವರ ಬಗ್ಗೆ ಮಾತಾಡುವ ಯಾವ ನೈತಿಕತೆಯೂ ಇಲ್ಲ, ಮುಂದಿನ ದಿನಗಳಲ್ಲಿ ಅವರು ರೈಯವರ ಬಗ್ಗೆ ವೈಯಕ್ತಿಕ ನಿಂದನೆ ಮಾಡಿದರೆ ಪಕ್ಷ ಸುಮ್ಮನಿರುವುದಿಲ್ಲ ಎಂದು ಬೇಬಿ ಕುಂದರ್ ಎಚ್ಚರಿಸಿದರು.

ಜನಸೇವೆ ನಿರಂತರ: ಚಂದ್ರಪ್ರಕಾಶ್ ಶೆಟ್ಟಿ

ರಮನಾಥ ರೈ ಸೋತರೂ ಅವರ ಜನಸೇವೆ ನಿರಂತರವಾಗಿದೆ. ಪ್ರತಿದಿನವೂ ಕ್ಷೇತ್ರದಲ್ಲಿ ಸಂಚರಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ತನ್ನ ಜವಾಬ್ಧಾರಿಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ ಎಂದ ಜಿಲ್ಲಾ ಪಂಚಾಯತು ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಆದರೆ ಗೆದ್ದವರು ಯಾವ ಅಭಿವೃದ್ಧಿ ಕಾರ್ಯವನ್ನು ನಡೆಸುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಈ ಹಿಂದೆ ಮೋದಿ, ನಳಿನ್, ರಾಜೇಶ್ ನಾಯ್ಕ್, ಪ್ರಭಾಕರ ಭಟ್ಟರನ್ನು ನಿರಂತರ ನಿಂದಿಸುತ್ತಿದ್ದ ಹರಿಕೃಷ್ಣ ಬಂಟ್ವಾಳ್ ಈಗ ರಮಾನಾಥ ರೈಯವರನ್ಮು ನಿಂದಿಸುತ್ತಿದ್ದಾರೆ. ಸುಳ್ಳು ಹೇಳುವುದು ಮತ್ತು ಇನ್ನೊಬ್ಬರನ್ನು ನಿಂದಿಸುವುದಷ್ಟೇ ಅವರ ಕೆಲಸವಾಗಿರುವುದರಿಂದ ಅವರ ಮಾತನ್ನು ಈಗ ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಆದರೆ ರೈಯವರ ಬಗ್ಗೆ ವಿನಾಕಾರಣ ಮಾತನಾಡಿದರೆ ಸಹಿಸಲು ಸಾಧ್ಯವಿಲ್ಲ ಎಂದು ಚಂದ್ರಪ್ರಕಾಶ್ ಶೆಟ್ಟಿ ಹೇಳಿದರು.
ಜಿ.ಪಂ.ಸದಸ್ಯರಾದ ಬಿ.ಪದ್ಮಶೇಖರ ಜೈನ್, ಎಂ.ಎಸ್.ಮಹಮ್ಮದ್, ಮಂಜುಳಾ ಮಾಧವ ಮಾವೆ, ಸುದೀಪ್ ಕುಮಾರ್ ಶೆಟ್ಟಿ, ಮಾಯಿಲಪ್ಪ ಸಾಲ್ಯಾನ್,ಅಬ್ಬಾಸ್ ಅಲಿ, ಸದಾಶಿವ ಬಂಗೇರ, ಜಗದೀಶ ಕೊಯಿಲ, ಜನಾರ್ಧನ ಚೆಂಡ್ತಿಮಾರು ಮೊದಲಾದವರು ಸುದ್ದಿಗೋಷ್ಠಿಯಲ್ಲಿದ್ದರು.