ಅಭೂತಪೂರ್ವವಾಗಿ ಸಂಪನ್ನಗೊಂಡ ಕರಾವಳಿ ಕಲೋತ್ಸವ

ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಬೆಂಗಳೂರು ಮತ್ತು ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಬಂಟ್ವಾಳ ಆಶ್ರಯದಲ್ಲಿ ಡಿ.23ರಿಂದ ಜ.1ರವರೆಗೆ ಬಿ.ಸಿ.ರೋಡು ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣ ಗುರುಮಂದಿರದ ಬಳಿಯ ಕೀರ್ತಿಶೇಷ ಪದ್ಮಶ್ರೀ ಡಾ.ಕದ್ರಿ ಗೋಪಾಲನಾಥ ವೇದಿಕೆಯಲ್ಲಿ ನಡೆದ ಕರಾವಳಿ ಕಲೋತ್ಸವ 2019-20 ಹತ್ತು ಹಲವು ವೈವಿಧ್ಯಮಯಗಳ ಸಮಾಗಮವಾಗಿ ಅಭೂತಪೂರ್ವವಾಗಿ ಸಂಪನ್ನಗೊಂಡಿತು.
ನಿರಂತರ 1೦ ದಿನಗಳ ಕಾಲ ನಡೆದ

ಕಾರ್ಯಕ್ರಮಗಳು ಬಿ.ಸಿ.ರೋಡು ನಗರದಲ್ಲಿ ಕಲಾಭಿಮಾನಿಗಳ ಆಕರ್ಷಣೆಗೆ ಪಾತ್ರವಾಗಿ ಸಾಂಸ್ಕ್ರತಿಕ ಹಬ್ಬದ ವಾತಾವರಣವನ್ನು ಸೃಷ್ಠಿಸಿತು.
ಆರಂಭದ ದಿನದಂದು ಬಿ.ಸಿ.ರೋಡು ಶ್ರೀ ಅನ್ನಪೂರ್ಣೇಶ್ವರಿ ಕಲಾಮಂಟಪದಿಂದ ಸಭಾಂಗಣದವರೆಗೆ ನಾಡಿನ‌ ಕಲಾತಂಡಗಳ ಕಲಾಪ್ರದರ್ಶನದೊಂದಿಗೆ ಸಾಗಿದ ವೈಭವದ ಜಾನಪದ ದಿಬ್ಬಣ ಮೆರವಣಿಗೆ, ಸಂಸದರು- ಶಾಸಕರು-ನಾಡಿನ ವಿವಿಧ ಕ್ಷೇತ್ರಗಳ ಗಣ್ಯರ ಸಮಕ್ಷಮದಲ್ಲಿ ಪ್ರತಿ ದಿನ ಸಂಪನ್ನಗೊಂಡ ಸಭಾ ಕಾರ್ಯಕ್ರಮಗಳು, ಚಿಣ್ಣರೋತ್ಸವ, ಚಿಣ್ಣರ ಪ್ರಶಸ್ತಿ ಪ್ರದಾನ, ಕರಾವಳಿ ಸೌರಭ ಪ್ರಶಸ್ತಿ ಪ್ರದಾನ, ಪ್ರತಿದಿನ ನಡೆದ ಸಾಧಕರ ಸನ್ಮಾನ, ಪ್ರತಿಭಾವಂತರ ಪುರಸ್ಕಾರ ಕಾರ್ಯಕ್ರಮಗಳು ವಿಶೇಷ ಗಮನ ಸೆಳೆಯಿತು. ಕರಾವಳಿ ಸರಿಗಮಪ ಸಂಗೀತ ಸ್ಪರ್ಧೆ, ಕರಾವಳಿ ಝೇಂಕಾರ ಚೆಂಡೆ ಸ್ಪರ್ಧೆ ,ಡ್ಯಾನ್ಸ ಧಮಾಕ ಸ್ಪರ್ಧೆಗಳು

ಬಿ.ಸಿ.ರೋಡಿನ ಸಾಂಸ್ಕ್ರತಿಕ ಇತಿಹಾಸದಲ್ಲೊಂದು ಹೊಸ ದಾಖಲೆಯನ್ನು ನಿರ್ಮಿಸಿ ಅಪಾರ ಸಂಖ್ಯೆಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.


ಪ್ರತಿದಿನ ಸಂಜೆ ನಡೆದ ಸಾಂಸ್ಕ್ರತಿಕ ಕಾರ್ಯಕ್ರಮಗಳು, ಆರು ದಿನ ತಾಲೂಕಿನ ವಿವಿಧ ತಂಡಗಳ ಪಾಲ್ಗೊಳ್ಳುವಿಕೆಯಲ್ಲಿ ನಡೆದ ತುಳು ನಾಟಕ ಪ್ರದರ್ಶನಗಳು, ಸಿನಿಮಾವಲೋಕನ,ಸಿನಿಮಾ ತಾರೆಯರ ಪಾಲ್ಗೊಳ್ಳುವಿಕೆ ಪ್ರೇಕ್ಷಕರಿಗೆ ನಿತ್ಯ ರಸದೌತಣ ನೀಡುವಲ್ಲಿ ಯಶಸ್ವಿಯಾಯಿತು.


ಕಣ್ಮನ ಸೆಳೆಯುವ ವಿದ್ಯುತ್ ದೀಪಾಲಂಕಾರ, ಅಮ್ಯೂಸ್ ಮೆಂಟ್ ಪಾರ್ಕ್, ವಸ್ತು ಪ್ರದರ್ಶನ ಮಳಿಗೆಗಳು, ವಿಶಾಲ ಸಭಾಂಗಣ, ಆಕರ್ಷಣನೀಯ ವೇದಿಕೆ, ಅಚ್ಚುಕಟ್ಟಾದ ವ್ಯವಸ್ಥೆಯೊಂದಿಗೆ ಕರಾವಳಿ ಕಲೋತ್ಸವ ಮಾದರಿಯಾಗಿ ಸಂಪನ್ನಗೊಂಡಿತು.
ಕರಾವಳಿ ಕಲೋತ್ಸವ ಅಧ್ಯಕ್ಷ ಸುದರ್ಶನ್ ಜೈನ್, ಗೌರವಾಧ್ಯಕ್ಷ ಜಯರಾಮ ರೈ, ಪ್ರಧಾನ ಸಂಚಾಲಕ ಮೋಹನದಾಸ ಕೊಟ್ಟಾರಿ ಮುನ್ನೂರು ನೇತೃತ್ವದಲ್ಲಿ ಸಮಿತಿಯ ಪ್ರಮುಖರು ಮತ್ತು ಸರ್ವ ಸದಸ್ಯರ ಪ್ರಯತ್ನ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಯಿತು.