ಯಾರವಳು

ನಾನು ನನ್ನ ಮನೆಯಿಂದ ಪ್ರತಿ ದಿನ ಬಸ್ಸ್ ಹಿಡಿಯುವ ಸ್ಥಳ ತಲುಪಲು ಒಂದತ್ತು ನಿಮಿಷದ ರಸ್ತೆ ಮಾರ್ಗ, ನಡೆಯುತ್ತಾ ಸಾಗುವುದೇ ನನ್ನ ಕರ್ಮ. ಈ ರಸ್ತೆಯಲ್ಲಿ ಪ್ರತಿದಿನ ಸಿಗುವ ಓರ್ವ ಹೆಣ್ಮಗಳು. ಸೀರೆಯ ದಾರಿಯಾಗಿ, ನನ್ನ ಸಮಯಕ್ಕೆ ಅವಳ ಸಮಯಕ್ಕೆ ಎದುರು ಸಿಗುತಿದ್ದಳು ಪಾದಚಾರಿಯಾಗಿ.
ನನ್ನ ಎದುರು ದಿಕ್ಕಿನಲ್ಲಿ ಅವಳ ಆಗಮನ, ಮದುವೆಯಾಗದ ಸಣ್ಣ ಹುಡುಗಿ , ಕೊರಳಲ್ಲಿ ಕರಿಸರ ಇಲ್ಲವೆಂದು ಅವಿವಾಹಿತೆ ಎಂದುಕೊಂಡಿದ್ದೆ. ನನ್ನ ನೋಡಿ ಒಂದು ಸಣ್ಣ ನಗು. ತುಟಿಯೊಳಗಿನ ಮೌನ ಮಾತಲ್ಲಿ ನಮಸ್ತೆ ಸಾರ್ ಎಂದು ಹ್ರದಯಕ್ಕೆ ಕೈ ಇಟ್ಟು ನಮಸ್ಕಾರದ ಗೌರವ ನನಗೆ. ನಾನೂ ಅಷ್ಟೆ ತಲೆ ತಗ್ಗಿಸಿ ನಮನದ ಸ್ವೀಕಾರ.
ಆದರೆ ಅವಳಾರು ಎನ್ನುವ ಗೋಜಿಗೆ ಹೋದವನು ನಾನಲ್ಲ,
ಅಭಿಮಾನದಿಂದ ಅಭಿಮಾನಿಯಾಗಿ ಅವಳು ನೀಡುವ ಗೌರವ ಎಂದು ಭಾವಿಸಿ ಮುಂದಡಿ ಇಡುತಿದ್ದೆ,
ಪ್ರತೀ ದಿನ ಅದೇ ಹೊತ್ತಲ್ಲಿ ಅವಳ ಆಗಮನ, ನಮನದ ಪ್ರೀತಿ. ನನ್ನದೂ ಅಷ್ಟೇ ನಮಸ್ಕಾರಕ್ಕೆ ಪ್ರತಿ ನಮಸ್ಕಾರ. ಅವಳು ಮೊಬೈಲ್ ನಲ್ಲಿ ಮಾತನಾಡುತ್ತಾ ಬರುತಿದ್ದರೂ ನನ್ನ ಹತ್ತಿರ ಬರುವಾಗ ಮೊಬೈಲ್ ಸ್ಥಗಿತವಾಗಿ ನಮ್ಮೊಳಗೆ ನಮಸ್ಕಾರದ ಕೊಡು ಕೊಳ್ಳುವಿಕೆ, ಮತ್ತೆ ಅವಳು ನನ್ನ ಬೆನ್ನಿಗೆ ಬೆನ್ನಾಕಿ ನಡೆದರೆ ನನ್ನದು ಅವಳ ಬೆನ್ನಿಗೆ ವಿರುದ್ಧದ ನಡೆ.
ಈಗೆ ಸಾಗುತಿತ್ತು.. ದಿನ ಉರುಳುತಿತ್ತು ನನಗೂ ಕುತೂಹಲ ಅವಳು ಯಾರವಳು ಅವಳು ಹತ್ತಿರ ಬಂದಾಗ ಅವಳ ಪರಿಚಯ ಕೇಳಬೇಕೆಂದಾಗ.. ಯಾಕೆ? ನನಗೆ ಇಲ್ಲ ಸಲ್ಲದ ಉಸಾಬಾರಿ. ಅವಳು ಯಾರಾದರೇನು? ಅವಳ ಪರಿಚಯವಾಗಿ ನನಗೇನು‌ ಲಾಭ? ಎಂದು ಎಂದಿನಂತೆ ನಮಸ್ತೆಯೊಂದಿಗೆ ಮುಂದೆಜ್ಜೆ ಇಡುತ್ತೇನೆ.

ಅವಳಿಗೂ ನನ್ನ ಜತೆ‌ ಮಾತನಾಡಬೇಕು‌ ಎನ್ನುವ ಹಂಬಲ ಇತ್ತೋ ಏನೋ? ಯಾಕೆಂದರೆ ಕೆಲವಾರು ಸಲ‌ ಅವಳು ನನ್ನ ಜತೆ ಮಾತಿಗಾಗಿ ಹಾತೊರೆಯುತಿದ್ದಳು. ಏನೊ ಹೆಣ್ಣಿಗೆ ಅಂಜಿಕೆಯೋ? ನನ್ನ ಗಂಭೀರ ವದನ ಕಂಡು ಹೆದರಿಕೆಯೋ? ಅಥವಾ ನನ್ನಂತೆ ಯಾಕೊಸ್ಕರ ಪರಿಚಯ ಎನ್ನುವ ಮನೋಸ್ಥಿತಿಯೋ?
ಆದರೆ ನನಗೆ ಪ್ರತಿದಿನ ಅವಳ ಬೇಟೆಯ ಆ ಕ್ಷಣ ಕಳೆದ ಬಳಿಕ ಅವಳಲ್ಲಿ ಮಾತನಾಡಬೇಕಿತ್ತು ಎನ್ನುವ ಮನಸು ಜಾಗ್ರತವಾಗುತಿತ್ತು.
ಏನೇ ಆಗಲಿ‌ ನಾಳೆ ಅವಳಲ್ಲಿ ಮಾತನಾಡಲೇಬೇಕು ಎಂದು ನಿರ್ಧರಿಸಿ, ನೀವು ಎಲ್ಲಿಂದ ಬರುವುದು? ಎಲ್ಲಿಗೆ ಹೋಗುವುದು? ಅಷ್ಟು ಸಾಕು ಎಂದು ಪ್ರಥಮ ಸಂಭಾಷಣೆ ತಯಾರು ಮಾಡಿ ಮರುದಿನಕ್ಕಾಗಿ ಕಾದೆ.
ಆ ದಿನದ ಆ ಕ್ಷಣ ಅವಳು ಎದುರಾದಾಗ ನನ್ನ ಒಳ ಮನಸ್ಸು ಹೇಳಿತು, ಅವಳಲ್ಲಿ ಆ ನನ್ನೆರಡು ಪ್ರಶ್ನೆಯನ್ನು ಕೇಳಿ ನನಗೇನು ಲಾಭ? ಮಾತಾಡಿದ ಕೂಡಲೇ ಮೊಬೈಲ್ ನಂಬರ್ ಬದಲಾವಣೆ, ಅದು ವಾಟ್ಸಪ್ ಗೆ ತಿರುಗಿ ಗುಡ್ ಮಾರ್ನಿಂಗ್, ಗುಡ್ ನೈಟ್ ದಿನಾ ರವಾಣೆ, ಒಂದು ದಿನ ಮರೆತು ಬಿಟ್ರೆ ಕೊಪದ ಮೂಡಲ್ಲಿ ಏನೇನೊ ಸ್ಟೇಟಸ್… ಬೇಡಾ, ಈಗ ಮೊಬೈಲ್ ಗೆ ಬರುವ ವಾಟ್ಸಪ್ ನ ಪೋಸ್ಟ್‌, ಪಿಕ್, ಬರಹಗಳನ್ನು ಡಿಲೀಟ್ ಮಾಡಲು‌ ರಾತ್ರೆಯ ಒಂದು ಗಂಟೆ ಅದಕ್ಕೇ ವೇಸ್ಟ್, ಪುನಃ ಇದೊಂದು ಸೇರ್ಪಡೆ ಎಂದು ಆ ದಿನವೂ ಎಂದಿನಂತೆ ನಮಸ್ಕಾರದೊಂದಿಗೆ ವಿರುದ್ಧ ದಿಕ್ಕಿಗೆ ಸಾಗಿದೆವು.
ದಿನ ಕಳೆಯಿತು ! ಆ ಹೆಣ್ಮಗಳು ಬರದೆ ದಿನಗಳೆಷ್ಟಾಯಿತು? ಪ್ರತಿ ದಿನವೂ ಆ ಹೊತ್ತಲ್ಲಿ ಬರುವ ಆ ಹುಡುಗಿ ಬರದೆ ಕೆಲವು ಸಮಯಗಳಾಯಿತು. ಕಾಯುತ್ತಿದ್ದೆ ಮೌನಿಯಾಗಿ, ಯಾವುದೇ ದುರಾಲೋಚನೆಯಿಂದಲ್ಲ.
ಒಂದಿನ ಕಾದೆ ಬೆಳಗಿನಿಂದ ಸಂಜೆಯ ತನಕ ಆಕರ್ಷಣೆಯಿಂದ ಅಲ್ಲ, ಕೇವಲ ನನ್ನ ಮನೆ ಮಗಳು ಎನ್ನುವ ಪ್ರೀತಿಯಿಂದ. ಅವಳನ್ನು‌ ನೋಡುವ ತವಕ. ಅವಳ ನಮಸ್ಕಾರ ಸ್ವೀಕರಿಸುವ ಪುಳಕ .
ಉಂ,, ಉಂ.. ಅವಳಿಲ್ಲ‌, ಬಸ್ಸ್ ಇಳಿಯುವ ಸ್ಥಳದಲ್ಲಿ ಎರಡು ಅಂಗಡಿ, ಒಂದಷ್ಠು ರಿಕ್ಷಾಗಳು, ಅವರಲ್ಲಿ ವಿಚಾರಿಸಿದೆ. ಅವರ ಉತ್ತರ… ಹೌದು ಸಾರ್ ಅವಳು ಬಸ್ನಲ್ಲಿ ಬಂದು ಇಲ್ಲಿ ಇಳಿಯುತ್ತಾಳೆ ನೇರವಾಗಿ ಹೋಗುತ್ತಾಳೆ, ಯಾರು ಅಂತ ಗೊತ್ತಿಲ್ಲ ಆದರೆ ಕೆಲವು ದಿನ ಆಯಿತು ಆ ಹೆಣ್ಮಗುವನ್ನು ನೋಡದೆ ಎಂದರು.
ಏನು ಮಾಡುವುದು ಆ ಹುಡುಗಿ ಬರ್ತಾ ಇಲ್ಲ ಕನ್ಪರ್ಮ್. ಅವಳನ್ನು ಮಾತಾಡಿಸಬೇಕು ಅವಳ ಮನೆ ತಿಳಿದಿಲ್ಲ , ಅವಳು ಹೋಗುತಿದ್ದದ್ದು ಎಲ್ಲಿಗೆ ಅದೂ ಗೊತ್ತಿಲ್ಲ, ಸಂಪರ್ಕದ ನಂಬರೂ ಪಡೆದಿಲ್ಲ.
ಆ ಹುಡುಗಿಯ ನೋಡದೆ ಕೆಲವು ಸಮಯಗಳೇ ಉರುಳಿತು.‌ ಅದೇ …
ನಮ್ಮವರು ನಮ್ಮ ಪ್ರೀತಿ ಪಾತ್ರರು‌ ನಮ್ಮೊಂದಿಗೆ ಇರುವಾಗ ಅವರ ಅನಿವಾರ್ಯತೆ ನಮಗೆ ಬೇಕಾಗಲ್ಲ, ಅವರು ದೂರವಾದಾಗ ಅವರ ಬಗ್ಗೆ ಗೌರವ.
ಅವಳು ದೂರವಾಗಿ ವರ್ಷಗಳೇ ಕಳೆಯಿತು. ಆದರೆ ಅವಳ ನೆನಪು, ಮನಸ್ಸಲ್ಲಿ ಉಳಿಯಿತು. ಪ್ರತಿದಿನ ಆ ಕ್ಷಣ ಅವಳು ನೆನಪಾಗುತ್ತಾಳೆ… ಅವಳ ನಡಿಗೆ, ಅವಳ ಚೆಲುವು, ಗೌರವದ ಆ ನಮಸ್ಕಾರ, ಏನಂತೀರಾ…??
ಎಚ್ಕೆ ನಯನಾಡು
_ಅಮೂಲ್ಯ ಮನೆ
ಪಣೆಕಲ ಪಡ್ಪು
ಮಣಿಹಳ್ಳ- ಬಂಟ್ವಾಳ ಕಸ್ಬಾ