ನಿಸರ್ಗದ ಮಡಿಲಿನ ರಮಣೀಯ ತಾಣ-ಉರುಡಾಯಿ ಶ್ರೀ ಮುಖ್ಯಪ್ರಾಣ ದೇವಸ್ಥಾನ-ಮೇ 20ರಿಂದ 22ರವರೆಗೆ ಬ್ರಹ್ಮಕಲಶೋತ್ಸವ ಸಂಭ್ರಮ

ಬಂಟ್ವಾಳ: ತಾಲೂಕಿನ ಕುಡಂಬೆಟ್ಟು ಗ್ರಾಮದ ನಿಸರ್ಗದ ಮಡಿಲಿನ ರಮಣೀಯ ತಾಣ- ಉರುಡಾಯಿ ಶ್ರೀ ಮುಖ್ಯಪ್ರಾಣ ಸ್ವಾಮಿ ದೇವಸ್ಥಾನವು ಸರ್ವಾಂಗ ಸುಂದರವಾಗಿ ಪುನರ್ ನಿರ್ಮಾಣಗೊಂಡಿದ್ದು ಬ್ರಹ್ಮಕಲಶೋತ್ಸವಕ್ಕೆ ಸಜ್ಜಾಗಿದೆ. ಉಡುಪಿ ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದಂಗಳವರು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ವೇ.ಮೂ.ನಡ್ವಂತಾಡಿ ಬಾಲಕೃಷ್ಣ ಪಾಂಗಣ್ಣಾಯ ಅವರ ನೇತೃತ್ವದಲ್ಲಿ ಮೇ 20ರಿಂದ ಮೇ 22ರವರೆಗೆ ಶ್ರೀ ಮುಖ್ಯಪ್ರಾಣ ದೇವರ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ವಿವಿಧ ವೈಧಿಕ, ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ವೈಭವಯುತವಾಗಿ ಸಂಪನ್ನಗೊಳ್ಳಲಿದೆ. ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಶ್ರೀ ಕ್ಷೇತ್ರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮಕಲಶೋತ್ಸವದ ವಿವರ ನೀಡಿದರು.

ಅಭಿವೃದ್ಧಿ ಯೋಜನೆಗಳು:

ಗ್ರಾಮೀಣ ಪ್ರದೇಶದಲ್ಲಿರುವ ಈ ದೇವಸ್ಥಾನದಲ್ಲಿ ಸುಮಾರು 1.5 ಕೋಟಿ ವೆಚ್ಚದಲ್ಲಿ ನೂತನ ಶಿಲಾಮಯ ಗರ್ಭಗುಡಿ, ಕೂಡು ಮಂಟಪದ ಮೇಲ್ಛಾವಣಿಯ ತಾಮ್ರದ ಹೊದಿಕೆ, ಸುತ್ತು ಪೌಳಿ, ಸಾನಿಧ್ಯ ದೈವಗಳಿಗೆ ಪ್ರತ್ಯೇಕ ಕಟ್ಟೆಗಳು, ಪಾಕಶಾಲೆ, ತೀರ್ಥ ಬಾವಿ, ನಾಗನಕಟ್ಟೆ, ಅರ್ಚಕರ ಕೊಠಡಿ, ತಡೆಗೋಡೆ, ಶೌಚಾಲಯದ ವ್ಯವಸ್ಥೆ, ದೇವಸ್ಥಾನಕ್ಕೆ ಬರುವ ರಸ್ತೆ ಅಭಿವೃದ್ಧಿ ಮೊದಲಾದ ಯೋಜನೆಗಳು ಅನುಷ್ಠಾನಗೊಳ್ಳುತ್ತಿದೆ. ಊರ-ಪರವೂರ ಭಕ್ತಾಭಿಮಾನಿಗಳ ಉದಾರ ದೇಣಿಗೆ, ಸ್ಥಳದಾನ, ಶ್ರಮದಾನ ಸಹಿತ ಹಲವು ಬಗೆಯ ಸಹಕಾರಗಳೊಂದಿಗೆ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವದ ಸಿದ್ಧತಾ ಕಾರ್ಯಗಳು ನಡೆಯುತ್ತಿದೆ ಎಂದು ತುಂಗಪ್ಪ ಬಂಗೇರಾ ತಿಳಿಸಿದರು.

ಕಾರ್ಯಕ್ರಮಗಳ ವಿವರ:

ಮೇ 20ರಂದು ಮಧ್ಯಾಹ್ನ ೩ ಗಂಟೆಗೆ ರಾಮೊಟ್ಟು ಮೈದಾನದಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದ್ದು ಸಂಜೆ ನಡೆಯುವ ಧಾರ್ಮಿಕ ಸಭೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಮಾಜಿ ಸಚಿವ ಬಿ.ರಮಾನಾಥ ರೈ, ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಮೋಹನ ಆಳ್ವ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮತ್ತಿತರರು ಭಾಗವಹಿಸಲಿರುವರು. ಬಳಿಕ ತಾಂಬೂಲ ಕಲಾವಿದರಿಂದ ಪರಿಮಳ ಕಾಲೊನಿ ನಾಟಕ ನಡೆಯಲಿದೆ.
ಮೇ 21ರಂದು ಬೆಳಗ್ಗೆ 9.10ರ ಮಿಥುನ ಲಗ್ನದಲ್ಲಿ ಶ್ರೀ ದೇವರ ಬಿಂಬ ಪ್ರತಿಷ್ಠೆ, ನಾಗದೇವರ ಪ್ರತಿಷ್ಠೆ ಹಾಗೂ ದೈವಗಳ ಪ್ರತಿಷ್ಠೆ, ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ, ಸಂಜೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ನೃತ್ಯಾಂಜಲಿ ನಾಟ್ಯ ಶಾಲೆ ಬಸ್ತಿಕೋಡಿ ಇವರಿಂದ ನಾಟ್ಯ ವೈಭವ ನಡೆಯಲಿದೆ. ಧಾರ್ಮಿಕ ಸಭೆಯಲ್ಲಿ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಸಂಚಾಲಕ ಡಾ. ಪ್ರಭಾಕರ ಭಟ್ ಕಲ್ಲಡ್ಕ, ವಿಧಾನ ಪರಿಷತ್ ಸದಸ್ಯರಾದ ಪ್ರತಾಪ ಸಿಂಹ ನಾಯಕ್, ಮಂಜುನಾಥ ಭಂಡಾರಿ, ಹರೀಶ್ ಕುಮಾರ್ ಮತ್ತಿತರರು ಭಾಗವಹಿಸಲಿರುವರು. ಬಳಿಕ ಶಾರದಾ ಆರ್ಟ್ಸ್ ಕಲಾವಿದರಿಂದ ಯಾನ್ ಉಲ್ಲೆತ್ತಾ ತುಳು ನಾಟಕ ನಡೆಯಲಿದೆ.
ಮೇ 22ರಂದು ಬೆಳಗ್ಗೆ 10.30 ಕ್ಕೆ ಬ್ರಹ್ಮ ಕಲಶಾಭಿಷೇಕ ನಡೆಯಲಿದೆ. ಬಳಿಕ ಧಾರ್ಮಿಕ ಸಭೆ ನಡೆಯಲಿದ್ದು, ಉಡುಪಿ ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ, ಸಂಸದ ನಳಿನ್ ಕುಮಾರ್ ಕಟೀಲು, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಕಾರ್ಕಳ ಶಾಸಕ ಸುನಿಲ್ ಕುಮಾರ್, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಮತ್ತಿತರ ಗಣ್ಯರು ಭಾಗವಹಿಸಲಿರುವರು. ಬಳಿಕ ವಿಟ್ಠಲ ನಾಯಕ್ ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ, ಸಂಜೆ ರಂಗ ಪೂಜೆ, ರಾತ್ರಿ ಪರಿವಾರ ದೈವಗಳಿಗೆ ನೇಮೋತ್ಸವ ನಡೆಯಲಿದೆ ಎಂದು ತುಂಗಪ್ಪ ಬಂಗೇರಾ ವಿವರಿಸಿದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅಮ್ಮು ರೈ ಹರ್ಕಾಡಿ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ವೀರೇಂದ್ರ ಅಮೀನ್ ವಗ್ಗ, ಕೋಶಾಧಿಕಾರಿ ಜಯರಾಮ ಕುಲಾಲ್ , ಸಂತೋಷ್ ಕುಮಾರ್ ಜೈನ್ ಮೇಗಿನ ಕಾಡಬೆಟ್ಟು, ದಯಾನಂದ ಕುಲಾಲ್, ಸುರೇಶ್ ಉರುಡಾಯಿ ಮತ್ತಿತರರು ಉಪಸ್ಥಿತರಿದ್ದರು.

ರಂಗಪೂಜೆ, ಸೀಯಾಳಾಭಿಷೇಕ ಇಲ್ಲಿನ ವಿಶೇಷ ಸೇವೆ :

ಸುಮಾರು ಐದು ಶತಮಾನಗಳಿಂದ ಮೂಲ ಕುಂಞಣ್ಣಾಯ ವಂಶಸ್ಥರಿಂದ ಆರಾದಿಸಿಕೊಂಡು ಬಂದಿರುವ ಉರಾಡಾಯಿ ಶ್ರೀ ಮುಖ್ಯಪ್ರಾಣ ಸ್ವಾಮಿಯ ಸನ್ನಿಧಿಯು ಭಕ್ತರ ಪಾಲಿಗೆ ನಿಜಕ್ಕೂ ಅಭಯದಾಯಕ.
ಈ ದೇವಸ್ಥಾನವು ವಗ್ಗ, ಕಾಡಬೆಟ್ಟು ರಸ್ತೆಯಿಂದ ಸುಮಾರು 3.7 ಕಿ.ಮೀ ದೂರದಲ್ಲಿ ಮತ್ತು ವಾಮದಪದವಿನಿಂದ 3 ಕಿ.ಮೀ ದೂರದಲ್ಲಿದ್ದು ಪ್ರಕೃತಿ ರಮಣೀಯ ಸುಂದರ ಪರಿಸರದಲ್ಲಿದೆ. ಊರ-ಪರವೂರ ಭಕ್ತಾದಿಗಳ ಸಹಕಾರದಿಂದ ನಿತ್ಯಪೂಜೆ-ಪುನಸ್ಕಾರ, ವಾರ್ಷಿಕ ಜಾತ್ರಾ ಮಹೋತ್ಸವಗಳು ವಿದ್ಯುಕ್ತವಾಗಿ ನಡೆದುಕೊಂಡು ಬರುತ್ತಿದೆ.
ಕಾರಣೀಕ ಕ್ಷೇತ್ರವೆಂದು ಮನೆಮಾತಾಗಿರುವ ಶ್ರೀ ದೇಗುಲದಲ್ಲಿ ಭಕ್ತರು ರಂಗಪೂಜೆ ಮತ್ತು ಸೀಯಾಳಾಭಿಷೇಕ ವಿಶೇಷ ಸೇವೆಯನ್ನು ಸಮರ್ಪಿಸಿದಲ್ಲಿ, ಶ್ರೀ ದೇವರು ಅವರ ಇಷ್ಟಾರ್ಥಗಳನ್ನು ನೆರವೇರಿಸಿದ ಸಾಕಷ್ಟು ನಿದರ್ಶನಗಳಿದೆ. ಶ್ರೀ ಮುಖ್ಯಪ್ರಾಣ ಸ್ವಾಮಿಯ ನಯನ ಮನೋಹರ ದಿವ್ಯಮೂರ್ತಿಯು ಉರುಡಾಯಿಯಲ್ಲಿ, ಶಾಂತಾಕಾರವಾಗಿ ನೆಲೆಗೊಂಡು ಭಕ್ತಾದಿಗಳ ಮನಸ್ಸಿಗೆ ಮುದವನ್ನು ನೀಡುತ್ತಿರುವುದು ಇಲ್ಲಿನ ವಿಶೇಷತೆ.
ಅತ್ಯಂತ ಪ್ರಾಚೀನವಾದ ಈ ದೇವಸ್ಥಾನವು ಜೀರ್ಣಾವಸ್ಥೆಯಲ್ಲಿದ್ದಾಗ ದೇವಸ್ಥಾನವನ್ನು ಪುನರ್ ನವೀಕರಣಗೊಳಿಸಬೇಕೆಂದು ಭಕ್ತಾದಿಗಳು ನಿಶ್ಚಯಿಸಿದಂತೆ, ಬಲೂರು ಮುರಳೀಧರ ತಂತ್ರಿ ಅವರ ನೇತೃತ್ವದಲ್ಲಿ ನಡೆದ ಆರೂಢ ಪ್ರಶ್ನಾ ಚಿಂತನೆಯ ಪ್ರಕಾರ ದೇವಾಲಯದ ಜೀರ್ಣೋದ್ಧಾರ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದ್ದು ಇದೀಗ ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿದೆ.
ಆಡಳಿತ ಸಮಿತಿ, ಜೀರ್ಣೋದ್ಧಾರ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳು, ಉಪಸಮಿತಿಗಳು, ಊರಪರವೂರ ಭಕ್ತಾದಿಗಳು ಬ್ರಹ್ಮಕಲಶೋತ್ಸವದ ಯಶಸ್ವಿಗಾಗಿ ತೊಡಗಿಸಿಕೊಂಡಿದ್ದಾರೆ.

ವರದಿ:
ಗೋಪಾಲ ಅಂಚನ್
ಸಂಪಾದಕರು:
ಯುವಧ್ವನಿ ನ್ಯೂಸ್ ಕರ್ನಾಟಕ
ಮೊ:9449104318