ಅಪಾರ ಜನಸಾಗರದೊಂದಿಗೆ ಮಾಜಿ ಸಚಿವ ಬಿ.ರಮಾನಾಥ ರೈ ನಾಮಪತ್ರ ಸಲ್ಲಿಕೆ

ಬಂಟ್ವಾಳ: ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ, ಮಾಜಿ ಸಚಿವ ಬಿ.ರಮಾನಾಥ ರೈ ಗುರುವಾರ ನಾಮಪತ್ರ ಸಲ್ಲಿಸುವ ಸಂದರ್ಭ ಬಿ.ಸಿ.ರೋಡಿನಲ್ಲಿ ಅಪಾರ ಜನಸಾಗರ ನೆರೆದಿತ್ತು. ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಿಂದ ಸಹಸ್ರಾರು ಸಂಖ್ಯೆಯಲ್ಲಿ ಜನ ತಂಡೋಪತಂಡವಾಗಿ ಬಂದಿದ್ದು ಬಿ.ಸಿ.ರೋಡು ನಗರದಲ್ಲಿ ಸಂಭ್ರಮದ-ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು.
ಬೆಳಿಗ್ಗೆ ಶ್ರೀ ಕ್ಷೇತ್ರ ಪೊಳಲಿ, ಶ್ರೀ ಕ್ಷೇತ್ರ ನಂದಾವರ, ಬಿ.ಸಿ.ರೋಡು ಶ್ರೀ ರಕ್ತೇಶ್ವರೀ ದೇವಸ್ಥಾನ, ಮೊಡಂಕಾಪು ಚರ್ಚ್, ಮಿತ್ತಬೈಲು ಮತ್ತು ಬಂಟ್ವಾಳ ಮಸೀದಿಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ ಬಿ.ರಮಾನಾಥ ರೈ ಅವರು ಬಳಿಕ ಬಂಟ್ವಾಳ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ಈ ಸಂದರ್ಭ ಸಹಸ್ರಾರು ಸಂಖ್ಯೆಯ ಕಾರ್ಯಕರ್ತರು ಹಾಗೂ ಅಭಿಮಾನಿಗಳು ರೈಯವರೊಂದಿಗೆ ಪಾದಯಾತ್ರೆಯಲ್ಲಿ ಸಾಗುತ್ತಾ ಕಾಂಗ್ರೇಶ್ ಪಕ್ಷಕ್ಕೆ ಹಾಗೂ ರಮಾನಾಥ ರೈಯವರಿಗೆ ಜೈಕಾರ ಕೂಗಿದರು. ತಮ್ಮ ಅಭಿಮಾನದ ನಾಯಕನಿಗೆ ಮೆರವಣಿಗೆಯುದ್ದಕ್ಕೂ ಅಭಿಮಾನಿಗಳು ಹೂವಿನ ಮಳೆಗೈದು ಶುಭಕೋರಿದರು. ಹಿರಿಯರು, ಮಾತೆಯರು ರೈ ಅವರಿಗೆ ಹೂಮಾಲೆ ಹಾಕಿ ಆಶೀರ್ವದಿಸಿದರು. ಕೊಂಬು, ಚೆಂಡೆ, ವಾದ್ಯಘೋಷದೊಂದಿಗೆ ಬಂಟ್ವಾಳ ಪೇಟೆಯಲ್ಲಿ ಸಾಗಿಬಂದ ವೈಭವಯುತವಾದ ಮೆರವಣಿಗೆ ಬಿ.ಸಿ.ರೋಡಿನ ರಾಜರಸ್ತೆಯಲ್ಲಿ ಬಂದು ಪ್ಲೈ ಓವರ್ ಅಡಿಯಲ್ಲಿ ಸಮಾವೇಷಗೊಡಾಗ ಬಿ.ಸಿ.ರೋಡು ಪೇಟೆ ಸಂಪೂರ್ಣ ಜನಸಾಗರವಾಗಿ ರೂಪಾಂತರಗೊಂಡಿತ್ತು.
ಕೆಪಿಸಿಸಿ ಸದಸ್ಯರಾದ ಪಿಯೂಸ್ ಎಲ್.ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ, ಪಕ್ಷದ ಹಿರಿಯ ಮುಖಂಡ ಬಿ.ಎಚ್.ಖಾದರ್, ಬಂಟ್ವಾಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬೇಬಿ ಕುಂದರ್ ಅವರೊಂದಿಗೆ ತೆರಳಿ ಬಿ.ಸಿ.ರೋಡಿನ ವಿಧಾನ ಸೌಧದಲ್ಲಿ ಬಿ.ರಮಾನಾಥ ರೈ ನಾಮಪತ್ರ ಸಲ್ಲಿಸಿದರು.

ರಾಜ್ಯದಲ್ಲಿ ಕಾಂಗ್ರೇಸ್ ಅಧಿಕಾರಕ್ಕೆ ಬರುತ್ತದೆ:

ಈ ಸಂದರ್ಭ ನಡೆದ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ರೈ ನನಗೆ ಮತ್ತೊಮ್ಮೆ ಕಾಂಗ್ರೇಸ್ ಪಕ್ಷದ ಹಿರಿಮೆ ಗರಿಮೆಯನ್ನು ಉಳಿಸಲು ಜನರು ಒಂದಾಗಿದ್ದಾರೆ. ಕಾಂಗ್ರೇಸ್ ಪಕ್ಷವನ್ನು ಅಧಿಕಾರಕ್ಕೆ ತರಲು ನಿರ್ಧರಿಸಿದ್ದಾರೆ. ಆ ಮೂಲಕ ರಾಜ್ಯದಲ್ಲಿ ಜನತೆಗೆ ನೆಮ್ಮದಿಯ, ಸ್ವಾಭಿಮಾನದ ಮತ್ತು ಸೌಹಾರ್ಧತೆಯ ಬದುಕು ಕಲ್ಪಿಸುವ ಪಣತೊಟ್ಟಿದ್ದಾರೆ ಎಂದು ಹೇಳಿದರು.

ಅಗೌರವ ತರುವ ಕೆಲಸ ಮಾಡಿಲ್ಲ:

ಕಳೆದ ಬಾರಿ ಸಾಕಷ್ಟು ಅಭಿವೃದ್ದಿ ನಡೆಸಿದ್ದರೂ ವಿರೋಧ ಪಕ್ಷದವರ ವ್ಯಾಪಕ ಅಪಪ್ರಚಾರದಿಂದ ನನಗೆ ಸೋಲಾಗಿದೆ. ಸೋಲಿನಿಂದ ನಾನು ಬೇಸರಗೊಂಡಿಲ್ಲ, ಆದರೆ ನನ್ನನ್ನು ಸೋಲಿಸಿದ ರೀತಿಯ ಬಗ್ಗೆ ನನಗೆ ನೋವಿದೆ. ಆದರೆ ಈ ಬಾರಿ ಕ್ಷೇತ್ರದ ಜನತೆಗೆ ಸತ್ಯದ ಅರಿವಾಗಿದೆ. ವಿರೋಧ ಪಕ್ಷದವರ ಯಾವುದೇ ಅಪಪ್ರಚಾರಗಳಿಗೆ ಜನತೆ ಮರುಳಾಗುವುದಿಲ್ಲ. ಜನತೆ ಸತ್ಯವನ್ನು ಅರಿತು ನಮ್ಮನ್ನು ಆಶೀರ್ವದಿಸುತ್ತಾರೆ ಎನ್ನುವ ನಂಬಿಕೆ ನನಗಿದೆ. ನಾನು ನನ್ನ ಜೀವನದಲ್ಲಿ ಯಾವತ್ತೂ ತಪ್ಪು ಮಾಡಿಲ್ಲ. ಸುಳ್ಳು ಹೇಳಿದರೆ ದೇವರು ಯಾವತ್ತೂ ಮೆಚ್ಚಲ್ಲ. ಪಕ್ಷಕ್ಕಾಗಲಿ, ಕಾರ್ಯಕರ್ತರಿಗಾಗಲಿ, ಕ್ಷೇತ್ರದ ಜನತೆಗಾಗಲಿ ಅಗೌರವ ತರುವಂತ ಯಾವುದೇ ಕೆಲಸವನ್ನು ನಾನು ಮಾಡಿಲ್ಲ ಎಂದು ರೈ ಹೇಳಿದರು.

ಬಹುಮತಗಳಿಂದ ನನ್ನನ್ನು ಬೆಂಬಲಿಸುತ್ತಾರೆ ಎಂಬ ಆತ್ಮವಿಶ್ವಾಸ ನನಗಿದೆ-ರೈ

ಮತ್ತೊಮ್ಮೆ ನಿಮ್ಮೆಲ್ಲರ ಸೇವೆ ಸಲ್ಲಿಸುವ ಅವಕಾಶ ನನ್ನ ಮುಂದಿದ್ದು ಈ ಬಾರಿ ನೀವು ನನ್ನನ್ನು ಅತ್ಯಧಿಕ ಬಹುಮತಗಳಿಂದ ಬೆಂಬಲಿಸುತ್ತೀರಿ ಎಂಬ ಆತ್ಮವಿಶ್ವಾಸ ನನಗಿದೆ. ಇಂದು ಸಹಸ್ರ, ಸಹಸ್ರ ಸಂಖ್ಯೆಯಲ್ಲಿ ಬಂದು ನನ್ನನ್ನು ಆಶೀರ್ವದಿಸಿದ ತಾವೆಲ್ಲರೂ ನನ್ನ ಗೆಲುವಿಗೆ ಸಾಕ್ಷಿಯಾಗಿದ್ದು ತಮಗೆಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ. ಕಾಂಗ್ರೇಸ್ ಪಕ್ಷದಿಂದ 9ನೇ ಬಾರಿಗೆ ಸ್ಪರ್ಧಿಸಲು ಪಕ್ಷ ನನಗೆ ಅವಕಾಶ ನೀಡಿದೆ. ಶಾಸಕನಾಗಿ, ಸಚಿವನಾಗಿ ಬಂಟ್ವಾಳ ಕ್ಷೇತ್ರದ ಜನತೆಯ ಸೇವೆ ಮಾಡುವ ಅವಕಾಶ ನನಗೆ ದೊರೆತಿದೆ. ಕ್ಷೇತ್ರದ ಜನತೆ ಆರು ಬಾರಿ ನನ್ನನ್ನು ಆಶೀರ್ವದಿಸಿದ್ದಾರೆ. ಜನತೆಯ ಋಣ ತೀರಿಸಲು ನನ್ನಿಂದ ಯಾವತ್ತೂ ಸಾಧ್ಯವಿಲ್ಲ ಎಂದು ರಮಾನಾಥ ರೈ ಹೇಳಿದರು.

ವಿಧಾನ ಪರಿಷತ್ತು ವಿರೋಧ ಪಕ್ಷದ ನಾಯಕ ಬಿ.ಕೆ.ಹರೀಪ್ರಸಾದ್, ಮಾಜಿ ಶಾಸಕಿ ಟಿ.ಶಕುಂತಳಾ ಶೆಟ್ಟಿ, ಮಂಜೇಶ್ವರ ಶಾಸಕ ಅಶ್ರಫ್, ಕೇರಳದ ನ್ಯಾಯವಾದಿ ಗೋವಿಂದನ್, ನ್ಯಾಯವಾದಿ ಆಶ್ವನಿ ಕುಮಾರ್ ರೈ ಮಾತನಾಡಿ ಬಿ.ರಮಾನಾಥ ರೈ ಅವರನ್ನು ಬೆಂಬಳಿಸುವಂತೆ ಮನವಿ ಮಾಡಿದರು. ರಮಾನಾಥ ರೈ ಅವರ ಪತ್ನಿ ಧನಭಾಗ್ಯ ರೈ, ಸಹೋದರಿ ಚೆನ್ನವೇಣಿ ಶೆಟ್ಟಿ, ಪುತ್ರಿ ಚರೀಷ್ಮಾ ರೈ ಮೆರವಣಿಗೆಯುದ್ದಕ್ಕೂ ರೈ ಅವರೊಂದಿಗಿದ್ದರು.
ಎಐಸಿಸಿ ಪ್ರಮುಖರಾದ ರೋಜಿ ಜಾನ್, ಶಿಬಾ ರಾಮಚಂದ್ರನ್, ದ.ಕ.ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಹರೀಶ್ ಕುಮಾರ್, ವಿಧಾನ ಪರಿಷತ್ತು ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಸದಸ್ಯ ಐವನ್ ಡಿಸೋಜ, ಪುತ್ತೂರು ಅಭ್ಯರ್ಥಿ ಅಶೋಕ್ ಕುಮಾರ್ ರೈ, ಸುಳ್ಯ ಅಭ್ಯರ್ಥಿ ಕೃಷ್ಣಪ್ಪ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಪ್ರಮುಖರಾದ ರಾಕೇಶ್ ಮಲ್ಲಿ, ಪದ್ಮಶೇಖರ ಜೈನ್, ಸಂಜೀವ ಪೂಜಾರಿ ಬೊಳ್ಳಾಯಿ, ಮಾಯಿಲಪ್ಪ ಸಾಲ್ಯಾನ್, ಮಮತ ಗಟ್ಟಿ, ಎಂ.ಎಸ್.ಮಹಮ್ಮದ್, ಲುಕ್ಮಾನ್ ಬಿ.ಸಿ.ರೋಡು, ಜಯಂತಿ.ವಿ.ಪೂಜಾರಿ, ಲವೀನಾ ವಿಲ್ಮಾ ಮೊರಾಸ್, ಸುರೇಶ್ ಪೂಜಾರಿ ಜೋರಾ, ನವಾಜ್ ಬಡಕಬೈಲು, ಜನಾರ್ಧನ ಚೆಂಡ್ತಿಮಾರು, ಸುಭಾಶ್ಚಂದ್ರ ಶೆಟ್ಟಿ ಕೊಳ್ನಾಡು, ಉಮೇಶ್ ಸಪಲ್ಯ ಬೋಳಂತೂರು, ಅಬ್ಬಾಸ್ ಅಲಿ, ಮಹಮ್ಮದ್ ಷರೀಫ್, ಸುರೇಶ್ ಕುಲಾಲ್ ನಾವೂರು, ನಾರಾಯಣ ನಾಯ್ಕ್, ಬಾಲಕೃಷ್ಣ ಆಳ್ವ ಕೊಡಾಜೆ ಮೊದಲಾದವರಿದ್ದರು.