ಹಿರಿಯ ಪತ್ರಕರ್ತ, ಸಾಮಾಜಿಕ ಸಂಘಟಕ, ಪತ್ರಕರ್ತರ ಸಂಘದ ಪ್ರಮುಖ ವೆಂಕಟೇಶ ಬಂಟ್ಬಾಳ ಅವರಿಗೆ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಯುವಧ್ವನಿ ನ್ಯೂಸ್-ಕರ್ನಾಟಕ

ಬಂಟ್ವಾಳ: ಹಿರಿಯ ಪತ್ರಕರ್ತ, ಸಾಮಾಜಿಕ-ಧಾರ್ಮಿಕ ಸೇವಾಕರ್ತ, ಪತ್ರಕರ್ತರ ಸಂಘದ ಪ್ರಮುಖ ವೆಂಕಟೇಶ್ ಬಂಟ್ವಾಳ ಅವರ ಸೇವೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಸರಕಾರವು ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಬಂಟ್ವಾಳ ಕಸ್ಬಾ ಗ್ರಾಮದ ವಿ.ಪಿ.ರಸ್ತೆ ನಿವಾಸಿ ದಿವಂಗತ ವಿಶ್ವನಾಥ ನಾಯ್ಕ್ ಮತ್ತು ವಿಜಯ ದಂಪತಿಯ ನಾಲ್ಕು ಮಕ್ಕಳಲ್ಲಿ ಏಕೈಕ ಪುತ್ರನಾಗಿರುವ ವೆಂಕಟೇಶ್ ಬಂಟ್ವಾಳ ಅವರು ಹಿರಿಯ ಪತ್ರಕರ್ತರಾಗಿ, ಸಾಮಾಜಿಕ ಸಂಘಟಕರಾಗಿ, ಪತ್ರಕರ್ತರ ಸಂಘದ ಪ್ರಮುಖರಾಗಿ ಸೇವೆ ಸಲ್ಲಿಸಿದವರು.
ವೆಂಕಟೇಶ್ ಬಂಟ್ವಾಳ ಅವರು ಸುದೀರ್ಘ 28 ವರ್ಷಗಳಿಂದ ವಿವಿಧ ಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪಸಂಪಾದಕರಾಗಿ, ಅಂಕಣಗಾರರಾಗಿ ಸೇವೆ ಸಲ್ಲಿಸಿದವರು. ವಿವಿಧ ಧಾರ್ಮಿಕ ಮತ್ತು ಸಾಮಾಜಿಕ ಸಂಘಟನೆಗಳಲ್ಲಿಯೂ ಸಕ್ರೀಯರಾಗಿ ತೊಡಗಿಸಿಕೊಂಡಿರುವ ಇವರು ದ.ಕ.ಜಿಲ್ಲೆ ಮತ್ತು ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲೂ ಗಮನಾರ್ಹ ಸೇವೆ ಸಲ್ಲಿಸಿದವರು.
1967 ಆಗಸ್ಟ್ 2 ರಂದು ಜನಿಸಿದ ವೆಂಕಟೇಶ್ ಅವರು ತಮ್ಮ ಶಿಕ್ಷಣವನ್ನು ಬಂಟ್ವಾಳ ಎಸ್ .ವಿ .ಎಸ್ ವಿದ್ಯಾ ಸಂಸ್ಥೆಯಲ್ಲಿ ಪೂರೈಸಿದವರು. ನಂತರ ಮಂಗಳೂರಿನಲ್ಲಿ ವಿವಿಧ ಸಂಜೆ ಪತ್ರಿಕೆ, ದಿನಪತ್ರಿಕೆಯಲ್ಲಿ ಉಪಸಂಪಾದಕನಾಗಿ ಕಾರ್ಯನಿರ್ವಹಿಸಿದ ವೆಂಕಟೇಶ್ ಬಂಟ್ವಾಳ ಅವರು ಸುಮಾರು 23 ವರ್ಷಗಳಿಂದ ಹೊಸದಿಗಂತ ಪತ್ರಿಕೆಗೆ ಬಂಟ್ವಾಳ ವರದಿಗಾರರು.
ಇವರ ಸಾಮಾಜಿಕ- ಮಾನವೀಯ ಕಾಳಜಿಯ ವರದಿಗಳು, ಲೇಖನಗಳು ಮತ್ತು ಅಂಕಣ ಬರಹಗಳು ಓದುಗರ ಮೆಚ್ಚುಗೆಗೆ ಪಾತ್ರವಾಗಿದೆ. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ, ಉಪಾಧ್ಯಕ್ಷ, ಕಾರ್ಯದರ್ಶಿಯಾಗಿ ಸುದೀರ್ಘ ಅವಧಿ ಸೇವೆ ಸಲ್ಲಿಸಿರುವ ಇವರು ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿದ್ದ ಕಾಲದಲ್ಲಿ ನಡೆಸಿದ ಬಿ.ಸಿ.ರೋಡಿನ ಹದಗೆಟ್ಟ ರಸ್ತೆ ದುರಸ್ಥಿಯ ವಿನೂತನ ಪ್ರತಿಭಟನೆ ರಾಜ್ಯದ ಗಮನ ಸೆಳೆದಿತ್ತು.
ಪ್ರಸ್ತುತ ಮಂಗಳೂರು ಗಾಳದ ಕೊಂಕಣಿ ಅಭ್ಯುದಯ ಸಂಘದ ಕಾರ್ಯದರ್ಶಿಯಾಗಿ,
ತೊಕ್ಕೊಟ್ಟು ಶ್ರೀ ಸೋಮೇಶ್ವರಿ ಸೌಹಾರ್ಧ ಸಹಕಾರಿ ನಿಯಮಿತದ ನಿರ್ದೇಶಕರಾಗಿ,ಮುನ್ನೂರು ಗ್ರಾಮದ ಶ್ರೀ ಕ್ಷೇತ್ರ ಸೋಮನಾಥ ಉಳಿಯದ ಆಡಳಿತ ಸಮಿತಿ ಸದಸ್ಯರಾಗಿರುವ ಇವರು ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಕೊಡಮಾಡುವ ರಾಜ್ಯಮಟ್ಟದ “ಸ್ವಸ್ತಿಕ್ ಸಂಭ್ರಮ ಪುರಸ್ಕಾರ”, ಬಂಟ್ವಾಳ ತಾಲೂಕು 21 ನೇ ಕನ್ನಡ ಸಾಹಿತ್ಯ‌ ಸಮ್ಮೇಳನದ ಸನ್ಮಾನ ಸಹಿತ ನಾಡಿನ ವಿವಿಧ ಸಂಘಟನೆಗಳ ಸನ್ಮಾನ, ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ.
ಪತ್ನಿ ಅನುರಾಧ,ಮಕ್ಕಳಾದ ಗಗನ್,ಯಶಸ್ವಿನಿಯೊಂದಿಗೆ ಬಂಟ್ವಾಳದಲ್ಲಿ ಜೀವನ ನಡೆಸುತ್ತಿದ್ದಾರೆ.

ಬರಹ:
ಎ.ಗೋಪಾಲ ಅಂಚನ್
ಸಂಪಾದಕರು
ಯುವಧ್ವನಿ ನ್ಯೂಸ್-ಕರ್ನಾಟಕ
ಮೊಬೈಲ್:
9449104318