ಹಿರಿಯ ಕುಮಾರದರ್ಶನ ಪಾತ್ರಿ ಶ್ರೀ ಮೋನಪ್ಪ ಬಂಗೇರಾ ಪಾಲೆದಡಿ ಅವರಿಗೆ ವಾಮದಪದವು ಬಿಲ್ಲವ ಸಂಘದಿಂದ ಸನ್ಮಾನ

ವಾಮದಪದವು ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಸಮಾಜ ಸೇವಾ ಸಂಘದ ವತಿಯಿಂದ ಆಲದಪದವಿನಲ್ಲಿ ನಡೆದ
ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನದ ಲೋಕಾರ್ಪಣೆ ಮತ್ತು ಗುರು ಪೂಜೋತ್ಸವ
ಸಮಾರಂಭದಲ್ಲಿ ಸಂಘಕ್ಕೆ ಸ್ಥಳದಾನ ಮಾಡಿದ ಹಿರಿಯ ಕುಮಾರ ದರ್ಶನ
ಪಾತ್ರಿ ಶ್ರೀ ಮೋನಪ್ಪ ಬಂಗೇರಾ ಪಾಲೆದಡಿ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.


ಗಣ್ಯಾತಿಗಣ್ಯರು, ಸಹಸ್ರಾರು ಬಂಧುಗಳ ಸಮಕ್ಷದಲ್ಲಿ ಸೋಲೂರು ಮಠದ ಪೀಠಾಧಿಪತಿ ಶ್ರೀ ವಿಖ್ಯಾತನಂದ ಸ್ವಾಮೀಜಿ ಸನ್ಮಾನಿಸಿ ಹರಸಿದರು.
ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಪಾಲೆದಡಿ ನಿವಾಸಿಯಾದ
ಶ್ರೀ ಮೋನಪ್ಪ ಬಂಗೇರಾ ಅವರು ಹಿರಿಯ ಕುಮಾರ ದರ್ಶನ ಪಾತ್ರಿಯಾಗಿ ಪ್ರಸಿದ್ಧರಾದವರು.


ತನ್ನ 12ನೇ ವಯಸ್ಸಿನಲ್ಲೇ ಕುಮಾರ ದರ್ಶಕರಾಗಿ ಸಿರಿ ಆರಾದನಾ ಲೋಕಕ್ಕೆ ಪಾದಾರ್ಪಣೆ ಮಾಡಿದ ಮೋನಪ್ಪ ಬಂಗೇರ ಅವರು ಅಂದಿನಿಂದ ಇಂದಿನವರೆಗೂ ನಿರಂತರ ಶ್ರದ್ಧಾಭಕ್ತಿಪೂರ್ವಕವಾಗಿ ಶ್ರೀ ಬ್ರಹ್ಮಲಿಂಗೇಶ್ವರ ದೇವರ ಆರಾದನೆಯನ್ನು ನಡೆಸಿಕೊಂಡು ಬಂದವರು.
ಅದೆಷ್ಟೋ ವರ್ಷದಿಂದ ತನ್ನ ಮನೆಯಲ್ಲಿ ಸಿರಿದರ್ಶನ ದಲ್ಯ ಸೇವೆಯನ್ನು ನಡೆಸುವುದರ ಜತೆಯಲ್ಲಿ, ತಾನು ನೀಡುವ ಗಂಧಪ್ರಸಾದ, ಅಭಯದ ನುಡಿ ಹಾಗೂ ನಾಟಿ ವೈದ್ಯ ಪದ್ಧತಿಯ ಮೂಲಕ ಅದೆಷ್ಟೋ ಕುಟುಂಬಗಳ ಸಂಕಷ್ಟವನ್ನು ಪರಿಹರಿಸಿ ನೆಮ್ಮದಿಯ ಬದುಕನ್ನು ಕಲ್ಪಿಸಿದ ಮೋನಪ್ಪ ಬಂಗೇರಾ ಅವರು ಸಿರಿಗುಂಡದಪಾಡಿ ಶ್ರೀ ಬ್ರಹ್ಮಲಿಂಗೇಶ್ವರ ಕ್ಷೇತ್ರ ಸಹಿತ ಹಲವಾರು ಕ್ಷೇತ್ರಗಳಲ್ಲಿ ಕುಮಾರದರ್ಶನ ಪಾತ್ರಿಯಾಗಿ ಭಕ್ತಾದಿಗಳ ಅಭಿಮಾನಕ್ಕೆ ಪಾತ್ರರಾದವರು.


ಪ್ರತಿವರ್ಷ ತನ್ನ ಸಿರಿದರ್ಶನ ಪರಿವಾರದೊಂದಿಗೆ ದರೆಗುಡ್ಡೆ, ಕಬತಾರು ಆಲಡೆ ಕ್ಷೇತ್ರಗಳಲ್ಲಿ ನಡೆಯುವ ಸಿರಿಜಾತ್ರೆಯಲ್ಲಿ ಪಾಲ್ಗೊಂಡು, ದಲ್ಯ ಸೇವೆ ನೀಡುವ ಮೋನಪ್ಪ ಬಂಗೇರಾ ಅವರು ವಿಶೇಷ ಶ್ರದ್ಧಾಭಕ್ತಿ, ನೇಮನಿಯಮ, ಅನುಷ್ಠಾನ, ನಡೆನುಡಿಯ ಮೂಲಕ ಸಿರಿ ಆರಾಧನಾ ಕ್ಷೇತ್ರದಲ್ಲಿ ತನ್ನದೇ ಆದ ವಿಶೇಷ ಛಾಪು ಮೂಡಿಸಿದವರು.


ಅಪಾರ ದೈವಭಕ್ತರಾಗಿ, ಸರಳ ಸಜ್ಜನಿಕೆಯ ಸ್ನೇಹ ಜೀವಿಯಾಗಿ, ಕೊಡುಗೈ ದಾನಿಯಾಗಿ, ಎಲ್ಲರೊಂದಿಗೆ ಆತ್ಮೀಯ ಬಂಧುವಾಗಿ ಬೆರೆಯುವ, ಎಲ್ಲರ ಕಷ್ಟಗಳಿಗೆ ಸ್ಪಂದಿಸುವ ಮೋನಪ್ಪ ಬಂಗೇರಾ ಅವರು ಕರ್ತವ್ಯದಲ್ಲಿ ದಕ್ಷತೆ, ಸೇವೆಯಲ್ಲಿ ಪ್ರಾಮಾಣಿಕತೆ, ವ್ಯಕ್ತಿತ್ವದಲ್ಲಿ ಸನ್ನಡತೆಯನ್ನು ಮೈಗೂಡಿಸಿಕೊಂಡು ಬಂದವರು.
ವಾಮದಪದವು ಬಿಲ್ಲವ ಸಂಘದ ಅಭಿಮಾನಿಯಾಗಿ, ಸಮಾಜದ ಹಿತಚಿಂತಕರಾಗಿ, ಅದೆಷ್ಟೋ ವರ್ಷಗಳ ಹಿಂದೆ ಸಂಘಕ್ಕೆ 25ಸೆನ್ಸ್ ಸ್ಥಳವನ್ನು ದಾನ ಮಾಡಿ ಹೃದಯ ವೈಶಾಲ್ಯತೆಯನ್ನು ಮೆರೆದಿರುವ ಮೋನಪ್ಪ ಬಂಗೇರಾ ಅವರು ಸುಂದರವಾದ ಸಮುದಾಯ ಭವನ ನಿರ್ಮಾಣಕ್ಕೆ ಪ್ರೇರಕ ಶಕ್ತಿಯಾದವರು.


ಬಂಗೇರರೇ..ತಮ್ಮ ಬದುಕಿನುದ್ದಕ್ಕೂ ಸುಖ, ಶಾಂತಿ, ನೆಮ್ಮದಿ ನೆಲೆಯಾಗಿರಲಿ.
ಶ್ರೀ ದೇವರ ಪೂರ್ಣಾನುಗ್ರಹ ತಮ್ಮ ಮೇಲಿರಲಿ ಎಂದು ಯುವಧ್ವನಿ ನ್ಯೂಸ್ ಬಳಗ ಹಾರೈಸುತ್ತದೆ.

?️ಗೋಪಾಲ ಅಂಚನ್

………………………….
ಸ್ನೇಹಿತರೇ..ಕಳೆದ 22 ವರ್ಷಗಳಿಂದ ವಿವಿಧ ಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪಸಂಪಾದಕನಾಗಿ ದುಡಿದವನು ನಾನು. ನನ್ನ ಮಾಧ್ಯಮ ರಂಗದ ಸೇವೆಯಲ್ಲಿ ಪತ್ರಿಕಾಧರ್ಮದ ಎಲ್ಲೆ ಮೀರದೆ ಸತ್ಯ, ನ್ಯಾಯದ ಪರವಾಗಿ, ಸಾಮಾಜಿಕ ಸಮಸ್ಯೆಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ ತೃಪ್ತಿ ನನಗಿದೆ. ಆದರೆ ನಾನಿನ್ನೂ ಸ್ವತಂತ್ರವಾಗಿ ಮತ್ತು ನಿರ್ಬೀತಿಯಿಂದ ಸತ್ಯವನ್ನು ಸಮಾಜಕ್ಕೆ ತಿಳಿಸಬೇಕು ಎಂಬ ಹಂಬಲದಿಂದ ಕಳೆದ ವರ್ಷ ನನ್ನದೇ ಆದ ಯುವಧ್ವನಿ.ಕಾಂ. ಎಂಬ ವೆಬ್ ನ್ಯೂಸ್ ಪೋರ್ಟಲ್ ಅನ್ನು ಆರಂಭಿಸಿದ್ದೇನೆ.
ಈ ವೆಬ್ ನ್ಯೂಸ್ ನಲ್ಲಿ ನಮ್ಮೂರಿನ ಸುದ್ದಿಗಳು, ಹಿರಿಯರ ಬದುಕು ಆದರ್ಶಗಳ ಬಗ್ಗೆ ಸಂದರ್ಶನ, ವಿವಿಧ ಕ್ಷೇತ್ರದ ಸಾಧಕರು-ಪ್ರತಿಭಾವಂತರ ಪರಿಚಯ, ಉತ್ತಮ ಸಂಘಟನೆಗಳ ಪರಿಚಯ, ಮಕ್ಕಳು- ಮಹಿಳೆಯರು, ಯುವಸಮುದಾಯದ ಸಬಲೀಕರಣಕ್ಕೆ ಬೇಕಾದ ವಿಚಾರಧಾರೆಯನ್ನು ಪ್ರಕಟಿಸಲಾಗುತ್ತದೆ. ಆದರೆ ಈ ವೆಬ್ ನ್ಯೂಸ್ ಬಳಗಕ್ಕೆ ಯಾವುದೇ ಮೂಲ ಬಂಡವಾಳ ಇಲ್ಲ. ನೀವು ನೀಡುವ ಚಂದಾ ದರ ಅಥವಾ ಜಾಹೀರಾತಿನಿಂದಲೇ ಇದನ್ನು ಮುನ್ನಡೆಸಬೇಕಾಗಿದೆ. ಈ ಯುವಧ್ವನಿ ನಿಮ್ಮ ಧ್ವನಿಯಾಗಬೇಕು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಸಿಗಬೇಕೆನ್ನುವುದು ನಮ್ಮ ಉದ್ಧೇಶ. ಬನ್ನಿ….ಧ್ವನಿ ಇಲ್ಲದವರಿಗೆ ಧ್ವನಿಯಾಗುವ ಪಯಣದಲಿ ಜತೆಯಾಗಿ ಸಾಗೋಣ…
ಯುವಧ್ವನಿಯ ಚಂದಾದಾರರಾಗಿ, ಜಾಹೀರಾತುದಾರರಾಗಿ ನಮ್ಮನ್ನು ಬೆಂಬಲಿಸಿ…

ನಿಮ್ಮವನೇ…
ಗೋಪಾಲ ಅಂಚನ್
ಸಂಪಾದಕರು
ಯುವಧ್ವನಿ ನ್ಯೂಸ್
9449104318